ಕರೊನಾ ಮುಕ್ತಿಯಾದ ನಂತರದ ಐದು ಆರೈಕೆಗಳು

ayurdeva
Published on
ರೋಗಕಾರಕ ಸೂಕ್ಷ್ಮಜೀವಿಗಳಿಂದ ಬರುವ ಬಹುತೇಕ ರೋಗಗಳಲ್ಲಿ ಕಾಯಿಲೆಯು ಗುಣವಾಗುವ ಸಮಯದಲ್ಲಿ ಎರಡು ಮಹತ್ವಪೂರ್ಣ ಹಂತಗಳಿರುತ್ತವೆ. ರೋಗದ ಲಕ್ಷಣಗಳಿಂದ ವ್ಯಕ್ತಿಯು ಹೊರಬಂದೊಡನೆ ಇರುವುದು ಸಹಜ ಸ್ಥಿತಿ ಮಾತ್ರ. ವ್ಯಾಧಿಯು ಪೂತಿರ್ಯಾಗಿ ಗುಣವಾಗಿರುವುದಿಲ್ಲ! ಸಹಜ ಸ್ಥಿತಿಗೂ ಗುಣವಾಗಿರುವುದಕ್ಕೂ ವ್ಯತ್ಯಾಸವಿದೆ ಎಂಬುದೇ ಕುತೂಹಲಕಾರಿ ವಿಚಾರ. ರಕ್ತವೇ ಮುಂತಾದ ತಪಾಸಣಾ ಪರೀಕ್ಷೆಗಳಲ್ಲಿ ರೋಗದ ಸುಳಿವಿಲ್ಲ ಎಂದು ವರದಿ ಬಂದ ನಂತರವೂ ವ್ಯಾಧಿಯ ಸರಹದ್ದು ಇನ್ನೂ ದಾಟಿಯಾಗಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಹೌದು, ಸಹಜ ಸ್ಥಿತಿಯೆಂದರೆ ರೋಗ ಮುಕ್ತಿಯಾಗಿರುವ ಆರೋಗ್ಯದ ಘಟ್ಟ. ಸಂಪೂರ್ಣ ಗುಣವಾಗಿರುವುದೆಂದರೆ ಸ್ವಾಸ್ಥ್ಯದ ಹಂತ! ಒಂದೆರಡು ಉದಾಹರಣೆಗಳನ್ನು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಸಾಮಾನ್ಯ ಜ್ವರ ಬಂದಾಗ ಮೂರು ದಿನಗಳಲ್ಲಿ ಅದು ನಿಯಂತ್ರಣಕ್ಕೆ ಬಂದು ನಾಲ್ಕನೆಯ ದಿನ ಜ್ವರಬಿಟ್ಟು ಯಾವುದೇ ಲಕ್ಷಣಗಳು ಇಲ್ಲ ಎಂದಿಟ್ಟುಕೊಳ್ಳಿ. ಆಗ ಜ್ವರವೂ ಪೂತಿರ್ಯಾಗಿ ಗುಣವಾಯಿತು ಎಂದರ್ಥವಲ್ಲ! ಜ್ವರ ಕಡಿಮೆಯಾಗಿ ಸಹಜ ಸ್ಥಿತಿಗೆ ಬಂದಿದೆ ಎಂದಷ್ಟೇ ತಿಳಿದುಕೊಳ್ಳಬೇಕು. ನಾಲ್ಕನೆಯ ದಿನ ಐಸ್​ಕ್ರೀಮ್​ ಸವಿಯಲು ಮುಂದಾದರೆ ಜ್ವರವು ಮತ್ತೆ ಬಂದುಬಿಡುತ್ತದೆ. ಅದೇ ಐಸ್​ಕ್ರೀಮ್​ ಅನ್ನು ಹದಿನೈದು ದಿನಗಳ ನಂತರ ಸೇವಿಸಿದರೆ ಏನೂ ತೊಂದರೆಯಾಗುವುದಿಲ್ಲ! ಸರಿಯಾಗಿ ಅವಲೋಕಿಸಿದರೆ ಹದಿನೈದು ದಿನಗಳ ಬಳಿಕ ಐಸ್​ಕ್ರೀಮ್​ನ ಗುಣಮಟ್ಟ ಸ್ವಲ್ಪವಾದರೂ ಉಲ್ಭಣಿಸಿರುತ್ತದೆ. ಹಾಗಿದ್ದೂ ಋಣಾತ್ಮಕ ಪರಿಣಾಮ ಬೀರಲಿಲ್ಲ ಎಂದರೆ ರೋಗವು ಸಂಪೂರ್ಣವಾಗಿ ಗುಣವಾಗಿದೆಯೆಂದು ಅರ್ಥವಾಗುತ್ತದೆ. ಇಲ್ಲಿ ರೋಗನಿರೋಧಕ ಶಕ್ತಿ ಹಾಗೂ ಶರೀರದ ಬಲ ವೃದ್ಧಿಯೇ ಸಹಜ ಸ್ಥಿತಿ ಹಾಗೂ ಪೂರ್ಣಗುಣ ಎಂಬೆರಡು ಹಂತಗಳಲ್ಲಿ ಬದಲಾವಣೆ ತಂದಿರುವುದು ಎಂಬುದು ಸ್ಪಷ್ಟವಾಗುತ್ತದೆ. ಈ ಮಧ್ಯದಲ್ಲಿ ಏನೂ ವಿಶೇಷ ಮುತುವರ್ಜಿ ವಹಿಸಿರಲಿಲ್ಲವಾದರೂ ಏಕೆ ಇಂತಹ ಬದಲಾವಣೆ ಆಯಿತೆಂದು ಅಚ್ಚರಿಯಾಗಬಹುದು. ಸಣ್ಣಪುಟ್ಟ ಕಾಯಿಲೆಗಳಲ್ಲಿ ದೇಹವೇ ತನ್ನ ಶಕ್ತಿಯನ್ನು ಯಾವುದೇ ವಿಶೇಷ ಆರೈಕೆ ಇಲ್ಲದೆ ಹೆಚ್ಚಿಸಿಕೊಳ್ಳುವ ವಿದ್ಯೆಯನ್ನು ಕರಗತ ಮಾಡಿಕೊಂಡಿರುತ್ತದೆ. ಶರೀರವನ್ನು ತೀವ್ರವಾಗಿ ತಡಕಾಡಿದಂತಹ ರೋಗಗಳಲ್ಲಿ ಬಲವರ್ಧನೆಗೆ ರಸಾಯನ ಔಷಧ ಹಾಗೂ ಉಪಚಾರಗಳ ಅವಶ್ಯಕತೆ ಇರುತ್ತದೆ. ಇದರಲ್ಲಿ ಆಯುರ್ವೇದದ ಪಾತ್ರ ಮುಂಚೂಣಿಯಲ್ಲಿದೆ.

ಕರೊನಾ ವಿಚಾರವೂ ಇದಕ್ಕಿಂತ ಭಿನ್ನವಲ್ಲ. ಲಕ್ಷಣಗಳೇ ಇಲ್ಲದೆ ರೋಗ ಬಂದು ಹೋಗಿದ್ದಾಗ ಅಥವಾ ಸೌಮ್ಯ ಲಕ್ಷಣಗಳಿದ್ದಾಗ ದೇಹದಲ್ಲೇನೂ ತೊಂದರೆ ಆಗಿರುವುದಿಲ್ಲ. ಹೆಚ್ಚಿನ ಲಕ್ಷಣಗಳಿಂದ ಅಥವಾ ತೀವ್ರವಾಗಿ ಬಳಲಿದ್ದಾಗ ಶರೀರದ ಅವಯವಗಳಿಗೆ ಸಾಕಷ್ಟು ಹೊಡೆತ ಬಿದ್ದಿರುತ್ತದೆ. ಮುಖ್ಯವಾಗಿ ಉಸಿರಾಟದ ತೊಂದರೆ ತೀವ್ರವಾಗಿ ಆಗಿದ್ದರೆ ಶ್ವಾಸಕೋಶದ ಕಾರ್ಯಕ್ಷಮತೆಗೆ ಕುತ್ತು ತಂದಿರುತ್ತದೆ. ಹಾಗಾಗಿ

ಕೋವಿಡ್​ ಮುಕ್ತಿಯಾದಾಕ್ಷಣ ಎಲ್ಲವೂ ಸರಿಯಾಯಿತೆಂದಲ್ಲ. ಆಯುರ್ವೇದದ ಈ ಐದು ಉಪಚಾರಗಳನ್ನು ಕಾಯಿಲೆಯ ತೀವ್ರತೆಗನುಸರಿಸಿ ಮುಂದಿನ ಎರಡು ಮೂರು ತಿಂಗಳುಗಳ ಕಾಲ ಮಾಡುವುದು ಉತ್ತಮ.

1. ಬೆಟ್ಟದ ನೆಲ್ಲಿಕಾಯಿ ಚೂರ್ಣವನ್ನು ನೀರಿನೊಂದಿಗೆ ದಿನಕ್ಕೊಂದು ಚಮಚದಂತೆ ಸೇವಿಸಬಹುದು. ಇದು ಮುಖ್ಯವಾಗಿ ದೇಹದ ಸಮಗ್ರ ವ್ಯಾಧಿಕ್ಷಮತ್ವ ಹೆಚ್ಚಿಸುವುದಲ್ಲದೆ ಶ್ವಾಸಕೋಶಕ್ಕೆ ವಿಶೇಷವಾಗಿ ಬಲ ನೀಡುತ್ತದೆ.

2. ಹಿಪ್ಪಲಿಯ ಚೂರ್ಣವನ್ನು ಕಾಲು ಚಮಚದಷ್ಟು ಹಾಲು ಅಥವಾ ಜೇನುತುಪ್ಪದೊಂದಿಗೆ ತೆಗೆದುಕೊಳ್ಳುವುದೂ ಪ್ರಯೋಜನಕಾರಿ. ಶ್ವಾಸಕೋಶದ ಬಲವರ್ಧನೆಗೆ ಶ್ರೇಷ್ಠ ಉಪಾಯವಾಗಿದ್ದು ಕೋವಿಡ್​ ನಂತರದ ಉಸಿರಾಟದ ತೊಂದರೆಯ ಉಪಶಮನಕ್ಕೆ ಬಹಳ ಸಹಕಾರಿ

3. ಆಹಾರ ವ್ಯಂಜನಗಳಲ್ಲಿ ಸಾಮಾನ್ಯವಾಗಿ ಬಳಸುವ ತೊಗರಿಬೇಳೆಯನ್ನು ಕಡಿಮೆಮಾಡಿ ಹೆಸರುಬೇಳೆ, ಚೆನ್ನಂಗಿಬೇಳೆ (ಮಸೂರ್​ ದಾಲ್​), ಕಡ್ಲೆಬೇಳೆ (ಚೆನ್ನಾ ದಾಲ್​), ಹುರಳಿಕಾಳುಗಳಿಗೆ ಪ್ರಾಮುಖ್ಯತೆ ಕೊಟ್ಟರೆ ಒಳ್ಳೆಯದು. ಸಾಂಬಾರ ಪದಾರ್ಥಗಳಿಗೆ ಸ್ವಲ್ಪ ಪ್ರಾಧಾನ್ಯತೆ ಕೊಟ್ಟು ಸಾರು, ಸಾಂಬಾರುಗಳನ್ನು ತಯಾರಿಸಿದರೆ ಪಚನಶಕ್ತಿ ವೃದ್ಧಿಗೆ, ರಕ್ತದ ಸುಗಮ ಸಂಚಾರ ಹಾಗೂ ಉಸಿರಾಟದ ಅವಯವಗಳಿಗೆ ಬಲ ನೀಡುತ್ತದೆ.

4. ಮಧುಮೇಹ ಇಲ್ಲದವರು 2 ಚಮಚ ಜೇನುತುಪ್ಪವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕಾಲು ಚಮಚ ಶುಂಠಿಯ ರಸವನ್ನು ಸೇರಿಸಿ ಪ್ರತಿನಿತ್ಯ ಒಮ್ಮೆ ತೆಗೆದುಕೊಂಡರೆ ಹಿತವಾಗುತ್ತದೆ.

5. ಅರ್ಧ ಚಮಚದಷ್ಟು ಅಮೃತಬಳ್ಳಿಯ ಚೂರ್ಣವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಅರ್ಧವಾಗುವ ತನಕ ಕುದಿಸಿ ಸೋಸಿ ಅರ್ಧ ಚಮಚ ನಿಂಬೆಹಣ್ಣಿನ ರಸ ಸೇರಿಸಿ ರುಚಿಗೆ ತಕ್ಕಷ್ಟು ಸಾವಯವ ಬೆಲ್ಲ ಹಾಕಿ ದಿನಕ್ಕೊಮ್ಮೆ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪರಿಣಾಮಕಾರಿ ಉಪಚಾರವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net