

ಇಂದು ನಾವು ಅರ್ಜುನ ಮರದ ಗುಣ-ವಿಶೇಷತೆಗಳು ಮತ್ತು ಅದನ್ನು ಸಾಮಾನ್ಯವಾಗಿ ಬಳಸುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕೆ ಕನ್ನಡದಲ್ಲಿ ಹೊಳೆಮತ್ತಿ ಅಥವಾ ನೀರು ಮತ್ತಿ ಎಂದು ಕರೆಯುತ್ತಾರೆ. ಇದು ಅತ್ಯಂತ ಒಗರು ರುಚಿಯನ್ನು ಹೊಂದಿದ್ದು ತಂಪು ಗುಣವನ್ನು ಹೊಂದಿದೆ. ಕಫ ಮತ್ತು ಪಿತ್ತ ದೋಷಗಳನ್ನು ನಿಯಂತ್ರಿಸುವ ಶಕ್ತಿ ಅರ್ಜುನಕ್ಕಿದೆ. ಇದಕ್ಕೆ ಒಗರು ರಸ ಇರುವ ಕಾರಣ ಇದು ರಕ್ತಸ್ರಾವವನ್ನು ನಿಲ್ಲಿಸುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಗಾಯಗಳನ್ನು ಬೇಗ ಗುಣಪಡಿಸುತ್ತದೆ.
ಇದರ ಎಲ್ಲ ರೀತಿಯ ಪ್ರಯೋಜನ ಗಳನ್ನು ತಿಳಿದುಕೊಳ್ಳುವ ಮೊದಲು ಎಲ್ಲಕ್ಕಿಂತ ಮುಖ್ಯವಾದ ಹೃದಯಕ್ಕೆ ಶಕ್ತಿ ನೀಡುವ ಗುಣದ ಬಗ್ಗೆ ತಿಳಿದುಕೊಳ್ಳೋಣ. ಆಯುರ್ವೇದದ ಬಹುತೇಕ ಎಲ್ಲ ಗ್ರಂಥಗಳಲ್ಲಿ ಅರ್ಜುನ ಮರದ ತೊಗಟೆಯು ಹೃದ್ಯ ಅಂದರೆ ಹೃದಯಕ್ಕೆ ಶಕ್ತಿಯನ್ನು ತುಂಬುವುದು ಮತ್ತು ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ನಿವಾರಿಸುವುದು ಎಂದು ಹೇಳಿದ್ದಾರೆ.
ಅರ್ಜುನ ಮರದ ತೊಗಟೆಯ ಮೇಲೆ ಹಲವಾರು ಆಧುನಿಕ ಸಂಶೋಧನೆಗಳು ಕೂಡ ನಡೆದಿವೆ. ಈ ಸಂಶೋಧನೆಗಳಲ್ಲಿ ಕಂಡುಬಂದಿರುವ ಅಂಶವೇನೆಂದರೆ ಇದರ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗುವುದು ಮತ್ತು ಇದಕ್ಕೆ ಆಂಟಿಆಕ್ಸಿಡೆಂಟ್ ಗುಣವಿದೆ ಎಂಬುದು. ಅಷ್ಟೇ ಅಲ್ಲದೇ ಇದರಲ್ಲಿ ಕೋ ಎಂಜೈಮ್ ಕ್ಯೂ 10 (ಇಟಉ್ಞ್ಢಢಞಛಿ ಕಿ10) ಅಂಶವು ಹೇರಳವಾಗಿದೆ ಎಂಬುದು ತಿಳಿದುಬಂದಿದೆ. ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಇದು ಅತ್ಯಂತ ಪ್ರಯೋಜನಕಾರಿಯಾದುದು. ಈ ಗುಣಗಳ ಕಾರಣದಿಂದ ಕೊಲೆಸ್ಟರಾಲ್ ಮತ್ತು ರಕ್ತದೊತ್ತಡ ಹೆಚ್ಚಿದ್ದರೆ ಅರ್ಜುನ ವನ್ನು ಬಳಸಬಹುದು. ಹಾಗಾಗಿ ಕೌರವರ ಸೇನೆಯನ್ನು ನಾಶಪಡಿಸಿದ ಅರ್ಜುನನಂತೆಯೇ ಇದು ಕೂಡ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಾಶಪಡಿಸುತ್ತದೆ.
ಅರ್ಜುನ ಮರದ ತೊಗಟೆಯ ಇನ್ನೊಂದು ವಿಶೇಷ ಪ್ರಯೋಜನವೆಂದರೆ ಅದು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮುರಿದ ಮೂಳೆಗಳನ್ನು ಜೋಡಿಸುವಲ್ಲಿಯೂ ತುಂಬಾ ಪರಿಣಾಮಕಾರಿಯಾಗಿದೆ. ಆದ್ದರಿಂದ ವಯಸ್ಸಾದವರು, ಮೂಳೆಯ ಸಾಂದ್ರತೆ ಕಡಿಮೆ ಇರುವವರು, ಮೂಳೆ ಮುರಿತದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಹುದು.
ಈಗ ಇದನ್ನು ಸಾಮಾನ್ಯವಾಗಿ ಮನೆಮದ್ದಾಗಿ ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇದಕ್ಕೆ ಒಗರು ರುಚಿ ಇರುವುದರಿಂದ ಮತ್ತು ರೂ ಗುಣ ಅಂದರೆ ಒಣಗಿಸುವಿಕೆಯ ಗುಣ ಹೆಚ್ಚಿರುವುದರಿಂದ ಇದನ್ನು ಹೆಚ್ಚಾಗಿ ಸೇವಿಸಿದಾಗ ವಾತ ದೋಷದ ವೃದ್ಧಿಯಾಗುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಅರ್ಜುನ ಮರದ ತೊಗಟೆಯ ರಪಾಕ ಸೇವಿಸಲು ಆಯುರ್ವೇದ ವೈದ್ಯರು ತಿಳಿಸುತ್ತಾರೆ. 5 ಗ್ರಾಂನಷ್ಟು ಅರ್ಜುನ ಮರದ ತೊಗಟೆಯ ಚಿಕ್ಕ ಚಿಕ್ಕ ತುಂಡುಗಳನ್ನು ತೆಗೆದುಕೊಂಡು ಅದಕ್ಕೆ ಒಂದು ಲೋಟ ಹಾಲು ಮತ್ತು 4 ಲೋಟ ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಒಂದು ಲೋಟಕ್ಕೆ ಬತ್ತಿಸಿ ಸೋಸಿದರೆ ಅದು ಅರ್ಜುನ ರಪಾಕ ಆಗುತ್ತದೆ. ಇದನ್ನು ದಿನಕ್ಕೊಮ್ಮೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಪರಿಣಾಮ ಸಿಗುತ್ತದೆ. ಈ ರೀತಿಯಾಗಿ ರಪಾಕ ಮಾಡಿ ಸೇವಿಸುವುದರಿಂದ ಅರ್ಜುನ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಇಷ್ಟು ಒಳ್ಳೆಯ ಗುಣಗಳನ್ನು ಹೊಂದಿದ್ದರೂ ಅರ್ಜುನ ಔಷಧವೇ ಹೊರತು ಆಹಾರ ದ್ರವ್ಯವಲ್ಲ. ಹಾಗಾಗಿ ಇದನ್ನು ಬಳಸುವ ಮೊದಲು ಒಮ್ಮೆ ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಒಟ್ಟಿನಲ್ಲಿ ಅರ್ಜುನವು ರಕ್ತದೊತ್ತಡ, ಕೊಲೆಸ್ಟರಾಲ್, ಮೂಳೆ ಸಾಂದ್ರತೆಯ ಕೊರತೆ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಒಂದು ವರದಾನವೇ ಸರಿ.