ನಾವೇ ನಿಜವಾದ ತಂದೆ-ತಾಯಿ ಎಂದವರ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ನಟ ಧನುಷ್​: ವೃದ್ಧ ದಂಪತಿಗೆ ಕಳುಹಿಸಿದ ನೊಟೀಸ್​​ನಲ್ಲೇನಿದೆ ಗೊತ್ತಾ?

Dhanush
Published on

ಚೆನ್ನೈ: ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಖ್ಯಾತ ನಟ ಧನುಷ್​ ಅವರ ವಿರುದ್ಧ ಆರೋಪವೊಂದು ಕೇಳಿಬಂದಿತ್ತು. ಅದು ವೃದ್ಧ ದಂಪತಿ ಮಾಡಿದ ಆರೋಪವಾಗಿತ್ತು. ನಟ ಧನುಷ್​​ ಅವರು ತಮ್ಮ ಮಗ ಎಂದು ಹೇಳಿಕೊಂಡು ಕೆಲವು ವರ್ಷಗಳಿಂದ ಸುದ್ದಿಯಲ್ಲಿರುವ ದಂಪತಿಗೆ ಕೊನೆಗೂ ಕಾನೂನು ರೀತಿಯಲ್ಲೇ ನೊಟೀಸ್​ ನೀಡಿದ್ದಾರೆ.

ನಾವು ಧನುಷ್​ ಅವರ ಜೈವಿಕ ತಂದೆ-ತಾಯಿ ಎಂದು ಹೇಳಿ ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದರು ಈ ದಂಪತಿ. ಇದೀಗ ಕಾನೂನು ರೀತಿಯಲ್ಲೇ ಉತ್ತರಿಸಲು ಮುಂದಾಗಿರುವ ನಟ ಧನುಷ್​​, ಮಧುರೈನ ಈ ದಂಪತಿಗೆ ತಮ್ಮ ವಕೀಲರ ಮೂಲಕ ನೊಟೀಸ್​​ ನೀಡಿದ್ದಾರೆ.

ತಮ್ಮ ಮಗನೆಂದು ಸುಳ್ಳು ಹೇಳಿಕೆ ಕೊಟ್ಟು ತಮ್ಮ ವರ್ಚಸ್ಸಿನ ಮೇಲೆ ಧಕ್ಕೆ ಬರುವಂತೆ ಈ ದಂಪತಿ ನಡೆದುಕೊಂಡಿದ್ದಾರೆ. ಇವರ ಹೇಳಿಕೆ ಸುಳ್ಳಾಗಿದ್ದು, ತಮ್ಮ ಕಕ್ಷಿದಾರನಿಗೆ 10 ಕೋಟಿ ರೂ. ಪರಿಹಾರ ನೀಡಬೇಕೆಂದು ನಟನ ಪರ ವಕೀಲ ಹೇಳಿದ್ದಾರೆ.

ತಮ್ಮ ವಿರುದ್ಧ ಮಾಡಿರುವ ಮಾನಹಾನಿಕರ ಆರೋಪವನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಆರೋಪದಿಂದ ಈ ದಂಪತಿ ಸುಮ್ಮನಾಗುತ್ತಾರೆ ಎಂದು ಭಾವಿಸಿದ್ದೆ. ಆದರೆ ಇವರ ಈ ಸುಳ್ಳು ಮುಂದುವರಿದಿದ್ದರಿಂದ ಕಾನೂನು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಸುಳ್ಳು , ಅಸಮರ್ಥನೀಯ ಮತ್ತು ಮಾನಹಾನಿ ಆರೋಪಗಳನ್ನು ಮಾಡಿದ ನಿಮ್ಮಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಂಪತಿಗೆ ನೊಟೀಸ್​​​ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net