ಶಾಲೆ ಕಟ್ಟಲು ಪಡೆದ ನಿವೇಶನದಲ್ಲಿ ಧಮ್ ಬಿರಿಯಾನಿ ಮಳಿಗೆ

chalavadi narayanaswamy
Published on

ಬೆಂಗಳೂರು: ಹೊಸಕೋಟೆಯಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಪಡೆದ ನಿವೇಶನದಲ್ಲಿ ದಮ್ ಬಿರಿಯಾನಿ ಕೇಂದ್ರ ನಡೆಸಲು ಅವಕಾಶ ನೀಡಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯರ ಪರಿಷತ್ ಸದಸ್ಯತ್ವವನ್ನೇ ರದ್ದುಗೊಳಿಸಿ ಎಂದು ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಒತ್ತಾಯಿಸಿದೆ.
ವಿಧಾನಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ನೇತೃತ್ವದಲ್ಲಿ ಪರಿಷತ್ ಸದಸ್ಯರು ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಭಾರತ ನ್ಯಾಯ ಸಂಹಿತಿ 316, 318 ಸೆಕ್ಷನ್ ಅಡಿ ಮೋಸ ಹಾಗೂ ನಂಬಿಕೆದ್ರೋಹ ಮಾಡಿರುವ ಕಾರಣಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಕೈ ನಾಯಕರು, ನಾರಾಯಣಸ್ವಾಮಿ ಪಡೆದಿರುವ ನಿವೇಶನದಲ್ಲಿ ಧಮ್ ಬಿರಿಯಾನಿ ಹೋಟೆಲ್ ಇದ್ದು ಯಾವ, ಯಾವ ಬಿಜೆಪಿ ನಾಯಕರಿಗೆ ತಿನ್ನಿಸಿದ್ದಾರೋ ಗೊತ್ತಿಲ್ಲ. ಬಿಜೆಪಿಯವರು ದೇಶಕ್ಕೆಲ್ಲಾ ನೀತಿಪಾಠ ಮಾಡುತ್ತಾರೆ. ಸತ್ಯಹರಿಶ್ಚಂದ್ರರಂತೆ ನಡೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಸಲೀಂ ಅಹ್ಮದ್, ಶಿಕ್ಷಣದ ಉದ್ದೇಶಕ್ಕೆ ಪಡೆದ ನಿವೇಶನದಲ್ಲಿ ಧಮ್ ಬಿರಿಯಾನಿ ಹೋಟೆಲ್ ನಡೆಯುತ್ತಿದೆ. ಈ ವಿಚಾರವಾಗಿ ಪರಿಷತ್ ವಿರೋಧ ಪಕ್ಷದ ನಾಯಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಅವರು ಅಧಿಕಾರಿಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ಲೋಕಾಯುಕ್ತಕ್ಕೂ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರು ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಇದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದಾಗ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಪರಿಷತ್ ಸದಸ್ಯ ಸುದಾಮ್ ದಾಸ್ ಮಾತನಾಡಿ, ಸಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದರೆ ಮರಳಿ ಪಡೆಯಬೇಕು ಎಂದು 2023 ಅಕ್ಟೋಬರ್‌ನಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ನಾರಾಯಣಸ್ವಾಮಿ ಅವರ ಅಕ್ರಮಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ನ್ಯಾಯಯುತವಾಗಿ ನಿವೇಶನ ಹಂಚಿಕೆಯಾಗಿದ್ದರೂ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಬೆಳವಣಿಗೆಗೆ ಮಲ್ಲಿಕಾರ್ಜುನ ಖರ್ಗೆಯವರು ಕಾರಣ. ಅವರಿಂದ ಅಧಿಕಾರ ಪಡೆದು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಎಂಎಲ್ಸಿ ವಸಂತ ಕುಮಾರ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ಮಗ ರಾಹುಲ್ ಖರ್ಗೆ ಅವರ ಸಿದ್ದಾರ್ಥ ವಿಹಾರ ಸಂಸ್ಥಗೆ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿಎ ನಿವೇಶನ ನೀಡಿರುವುದು ಕಾನೂನಾತ್ಮಕವಾಗಿದೆ. ನಾರಾಯಣಸ್ವಾಮಿ ಅವರು ದೆಹಲಿ ನಾಯಕರನ್ನು ತೃಪ್ತಿ ಪಡಿಸಲು ಜನರಿಗೆ ಇದರ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.
ಅವರೇ ಅಕ್ರಮಗಳ ಸರಮಾಲೆ ಮಾಡಿದ್ದಾರೆ. ಇಂತಹ ವ್ಯಕ್ತಿ ಸ್ವತಃ ಭ್ರಷ್ಟಾಚಾರಿಗಳು. ಅವರೇ ಸರಿ ಇಲ್ಲದಿದ್ದರೂ ಇನ್ನೊಬ್ಬರ ಬಗ್ಗೆ ಅಪಾದನೆ ಮಾಡುತ್ತಿದ್ದಾರೆ. ಇವರಿಗೆ ಕಿಂಚಿತ್ತೂ ನೈತಿಕತೆಯಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ದಿನೇಶ್ ಗೂಳಿಗೌಡ, ಜಗದೇವ್ ಗುತ್ತೆದಾರ್, ತಿಪ್ಪಣ್ಣ ಕಮಕನೂರು, ಚಂದ್ರಶೇಖರ ಪಾಟೀಲ, ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷರಾದ ಧರ್ಮಸೇನ, ಕೆಪಿಸಿಸಿ ಉಪಾಧ್ಯಕ್ಷರಾದ ಶರಣಪ್ಪ ಮಟ್ಟೂರು, ಎಂ. ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net