ಪಿಸಿಯಿಂದ ಎಎಸ್‌ಐವರೆಗೂ ವರ್ಗಾವಣೆಗೊಳಿಸಿ ಡಿಜಿಪಿ ಆದೇಶ

police
Published on

ಬೆಂಗಳೂರು: 5 ವರ್ಷಗಳ ಸೇವೆಯನ್ನು ಒಂದೇ ಸ್ಥಳದಲ್ಲಿ ಪೂರೈಸಿರುವ ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಹಿಡಿದು ಸಹಾಯಕ ಸಬ್ ಇನ್‌ಸ್ಪೆಕ್ಟರ್‌ವರೆಗೂ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಮಹಾ ನಿದೇರ್ಶಕ ಅಲೋಕ್ ಮೋಹನ್ ಆದೇಶಿಸಿದ್ದಾರೆ.
ಜು.೬ ರಂದು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಸೂಚನೆಯ ಅನ್ವಯ ತಮ್ಮ ಘಟಕಗಳಲ್ಲಿ ಒಂದೇ ಸ್ಥಳ ಅಥವಾ ಠಾಣೆಗಳಲ್ಲಿ ೫ ವರ್ಷ ಕರ್ತವ್ಯ ನಿರ್ವಹಿಸಿರುವ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯಿಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಯವರೆಗಿನ ಅಧಿಕಾರಿ/ಸಿಬ್ಬಂದಿಯನ್ನು ಕೂಡಲೇ ಬೇರೆ ಠಾಣೆ ಅಥವಾ ಸ್ಥಳಗಳಿಗೆ ಬದಲಾವಣೆ ಮಾಡಲು ಮತ್ತು ಯಾವುದೇ ಕಾರಣಕ್ಕೂ ಅಂತಹ ಸಿಬ್ಬಂದಿಯನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮತ್ತೆ ಮುಂದುವರಿಸುವಂತಿಲ್ಲ ಎಂದು ತಾಕೀತು ಮಾಡಿದ್ದರು. ಸಿಎಂ ಸೂಚನೆಯ ಹಿನ್ನೆಲೆಯಲ್ಲಿ ೫ ವರ್ಷಗಳ ಸೇವೆಯನ್ನು ಒಂದೇ ಸ್ಥಳದಲ್ಲಿ ಪೂರೈಸಿರುವ ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಹಿಡಿದು ಸಹಾಯಕ ಸಬ್ ಇನ್‌ಸ್ಪೆಕ್ಟರ್‌ವರೆಗೂ ವರ್ಗಾವಣೆಗೊಳಿಸುವಂತೆ ರಾಜ್ಯ ಪೊಲೀಸ್ ಮಹಾ ನಿದೇರ್ಶಕರು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ. ಜತೆಗೆ ಈ ಕುರಿತಂತೆ ಕೈಗೊಂಡ ಕ್ರಮದ ಮಾಹಿತಿಯನ್ನು ೭ ದಿನಗಳ ಒಳಗಾಗಿ ಡಿಜಿಪಿ ಕಚೇರಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ. ಇನ್ನು ಹಲವಾರು ಘಟಕಗಳಲ್ಲಿ ಸಿಬ್ಬಂದಿ ಒಂದೇ ಸ್ಥಳ/ಠಾಣೆಯಲ್ಲಿ ೫ ವರ್ಷಗಳಿಗೂ ಮೇಲ್ಪಟ್ಟು ಓಓಡಿ ಆಧಾರದ ಮೇಲೆ ಸ್ಥಳ ನಿಯುಕ್ತಿಗೊಳಿಸುವುದು ಕಂಡು ಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net