

ಮುಂಬೈ: ಅಹಮದಾಬಾದ್ ವಿಮಾನ ಪತನ ಘಟನೆ ಹಿನ್ನೆಲೆಯಲ್ಲಿ ಏರ್ ಇಂಡಿಯಾದ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಮೂವರು ಅಧಿಕಾರಿಗಳನ್ನು ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್ ಸಂಬಂಧಿತ ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕುವಂತೆ ವಿಮಾನಯಾನ ಸುರಕ್ಷತಾ ಕಾವಲು ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೂಚಿಸಿದೆ.
ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಆದೇಶ | ಪರವಾನಗಿ ಅಮಾನತು ಮಾಡುವ ಎಚ್ಚರಿಕೆ
ಆದಷ್ಟು ಶೀಘ್ರ ಮೂವರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಜಿಸಿಎ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಭವಿಷ್ಯದಲ್ಲಿ ಸಿಬ್ಬಂದಿ ವೇಳಾಪಟ್ಟಿ ಮಾನದಂಡಗಳು, ಪರವಾನಗಿ ಅಥವಾ ವಿಮಾನ ಹಾರಾಟದ ಕರ್ತವ್ಯದ ಸಮಯದ ಮಿತಿಗಳ ಉಲ್ಲಂಘನೆ ಲೆಕ್ಕಪರಿಶೋಧನೆ ಅಥವಾ ತಪಾಸಣೆಗಳಲ್ಲಿ ಪತ್ತೆಯಾದರೆ ದಂಡ ವಿಧಿಸುವ ಜತೆಯಲ್ಲೇ ಪರವಾನಗಿ ಅಮಾನತು ಮಾಡುವಂತಹ ಕಠಿಣ ಕ್ರಮವನ್ನು ಜಾರಿಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ.
ಏರ್ ರೂಟ್ ಮ್ಯಾನೇಜ್ವೆುಂಟ್ ಸಿಸ್ಟಮ್ (ಎಆರ್ಎಂಎಸ್) ತಂತ್ರಾಂಶದ ಪರಿಶೀಲನೆ ವೇಳೆ ಏರ್ ಇಂಡಿಯಾ ಸಿಬ್ಬಂದಿ ರೋಸ್ಟರಿಂಗ್ ಮತ್ತು ವಿಮಾನ ವೇಳಾಪಟ್ಟಿ ನಿರ್ವಹಣೆ ಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿಜಿಸಿಎ ಏರ್ ಇಂಡಿಯಾಗೆ ಎಚ್ಚರಿಕೆ ನೀಡಿದೆ. ಡಿಜಿಸಿಎ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಡಿಜಿಸಿಎ ಆದೇಶವನ್ನು ಪಾಲನೆ ಮಾಡಲಾಗುವುದು, ಭವಿಷ್ಯದಲ್ಲಿ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದೆ.
ಶೋಕಾಸ್ ನೋಟಿಸ್ ಜಾರಿ: ಏರ್ ಇಂಡಿಯಾ ಸಂಸ್ಥೆ ಸಿಬ್ಬಂದಿಯ ವಿಮಾನ ಕರ್ತವ್ಯ ಸಮಯ ಮಿತಿಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಮೇ 16 ಮತ್ತು 17 ರಂದು ಬೆಂಗಳೂರು ಲಂಡನ್ ವಿಮಾನಗಳ ಸ್ಪಾಟ್ ಚೆಕ್ ಸಮಯದಲ್ಲಿ ಈ ಉಲ್ಲಂಘನೆಗಳು ಕಂಡು ಬಂದಿವೆ. ವಿಮಾನ ಕರ್ತವ್ಯ ಸಮಯ ಮಿತಿಯಲ್ಲಿ 10 ಗಂಟೆಯ ಮಿತಿಯನ್ನು ಮೀರಿದೆ. ಏರ್ ಇಂಡಿಯಾ ಲಿಮಿಟೆಡ್ನ ಅಕೌಂಟೆಬಲ್ ಮ್ಯಾನೇಜರ್ ನಿಬಂಧನೆಗಳು ಅನುಸರಣೆ ಅಗತ್ಯತೆಗಳನ್ನು ಖಚಿತಪಡಿಸಿ ಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಮತ್ತೊಮ್ಮೆ ಡಿಎನ್ಎ ಮಾದರಿ ಸಂಗ್ರಹ: ವಿಮಾನ ದುರಂತದಲ್ಲಿ ಮೃತಪಟ್ಟ 8 ಜನರ ಕುಟುಂಬಸ್ಥರು ನೀಡಿದ್ದ ಡಿಎನ್ಎಯ ಮೊದಲ ಮಾದರಿ ಮ್ಯಾಚ್ ಆಗದ ಹಿನ್ನೆಲೆಯಲ್ಲಿ ಮತ್ತೋರ್ವ ಕುಟುಂಬಸ್ಥರ ಡಿಎನ್ಎ ಮಾದರಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಸ್ಥರೊಂದಿಗೆ ಡಿಎನ್ಎ ಮ್ಯಾಚ್ ಆಗದಿದ್ದರೆ ಮೃತದೇಹಗಳನ್ನು ಹಸ್ತಾಂತರ ಮಾಡಲು ಸಾಧ್ಯವಿಲ್ಲ ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ರಾಕೇಶ್ ಜೋಶಿ ತಿಳಿಸಿದ್ದಾರೆ.
231 ಜನರ ಗುರುತು ಪತ್ತೆ: ಶುಕ್ರವಾರದವರೆಗೆ 231 ಜನರ ಗುರುತು ಪತ್ತೆಯಾಗಿದ್ದು, 210 ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಆದಷ್ಟು ಶೀಘ್ರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಫೊರೆನ್ಸಿಕ್ ಸೈನ್ಸ್ ವಿಶ್ವವಿದ್ಯಾಲಯ ಮತ್ತು ಸ್ಥಳೀಯ ಆಡಳಿತ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
ಜೂನ್ 1ರಂದು ದೆಹಲಿಯಿಂದ ಹಾಂಗ್ಕಾಂಗ್ಗೆ ಹಾರಾಟ ನಡೆಸಿದ್ದ ಏರ್ ಇಂಡಿಯಾದ ಬೋಯಿಂಗ್ 787 ವಿಮಾನದ ಬಾಗಿಲು ಮಾರ್ಗ ಮಧ್ಯೆ ಅಲುಗಾಡಿದ್ದು ಅದರಿಂದ ವಿಚಿತ್ರ ಶಬ್ದ ಹೊರಹೊಮ್ಮಿದೆ. ಬಾಗಿಲಿನಿಂದ ಶಬ್ದ ಬರುತ್ತಿದ್ದಂತೆ ಪ್ರಯಾಣಿಕರು ಆತಂಕಕ್ಕೆ ಈಡಾಗಿದ್ದರು. ವಿಮಾನದ ಸಿಬ್ಬಂದಿ ಪೇಪರ್ ಟಿಶ್ಯೂಗಳನ್ನು ಬಳಸಿ ಬಾಗಿಲನ್ನು ಭದ್ರಪಡಿಸಿ ಶಬ್ದ ಕಡಿಮೆ ಮಾಡಿದ್ದರು. ಆ ಬಳಿಕ ವಿಮಾನ ಸುರಕ್ಷಿತವಾಗಿ ಹಾಂಗ್ಕಾಂಗ್ನಲ್ಲಿ ಲ್ಯಾಂಡ್ ಆಗಿತ್ತು. ವಿಮಾನ ರಾತ್ರಿ 11.45 ಕ್ಕೆ ಹೊರಟಿತ್ತು. ವಿಮಾನ ಹಾರಾಟ ಆರಂಭಿಸಿದ 1 ಗಂಟೆಯ ಬಳಿಕ ಬಾಗಿಲು ಅಲುಗಾಡಿದಂತಾಗಿ ಅದರಿಂದ ಶಬ್ದ ಬರುತ್ತಿತ್ತು. ಬಾಗಿಲಿನ ಸೀಲ್ ಕಟ್ ಆದಂತೆ ಭಾಸವಾಗುತ್ತಿತ್ತು ಎಂದು ಪ್ರಯಾಣಿಕರೊಬ್ಬರು ತಮ್ಮ ಅನುಭವ ಹಂಚಿ ಕೊಂಡಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ್ದ ಏರ್ ಇಂಡಿಯಾ ಬಾಗಿಲಿನ ಅಲಂಕಾರಿಕ ಪ್ಯಾನಲ್ನಲ್ಲಿ ಶಬ್ದ ಬರುತ್ತಿತ್ತು. ವಿಮಾನದ ಸಿಬ್ಬಂದಿ ತಾತ್ಕಾಲಿಕವಾಗಿ ಶಬ್ದವನ್ನು ಕಡಿಮೆ ಮಾಡಿದ್ದರು. ವಿಮಾನ ಹಾಂಗ್ಕಾಂಗ್ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ತಂತ್ರಜ್ಞರು ಸಮಸ್ಯೆ ಬಗೆಹರಿಸಿದ್ದರೆಂದು ತಿಳಿಸಿತ್ತು.