ಮೇ 21ರವರೆಗೆ ಡಿಜಿ-ಐಜಿಪಿ ಅಧಿಕಾರವಧಿ ವಿಸ್ತರಣೆ

DGP Alok Mohan
Published on

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಅಧಿಕಾರ ಅವಧಿಯನ್ನು ಮೇ 21ರವರೆಗೆ ಸರ್ಕಾರ ವಿಸ್ತರಣೆ ಮಾಡಿದೆ.

ಬುಧವಾರ (ಏ.30ಕ್ಕೆ) ನಿವೃತ್ತಿಯಾಗಬೇಕಿದ್ದ ಡಾ. ಅಲೋಕ್ ಮೋಹನ್, ಸುಪ್ರೀಂಕೋರ್ಟ್ ಆದೇಶದಂತೆ ಮತ್ತು ಕರ್ನಾಟಕ ಪೊಲೀಸ್ ನಿಯಮಾವಳಿ ಅನ್ವಯ 4 ತಿಂಗಳು ಅಧಿಕಾರಾವಧಿ ವಿಸ್ತರಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಮತ್ತೊಂದೆಡೆ ಸೇವಾ ಹಿರಿತನದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಮತ್ತು ಸಿಐಡಿಯ ಡಿಜಿಪಿ ಡಾ.ಎಂ.ಎ. ಸಲೀಂ ಅವರ ಹೆಸರೂ ಕೇಳಿಬಂದಿತ್ತು.

ಮಂಗಳವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆದು ಸಾಧಕ-ಬಾಧಕ ಚರ್ಚೆ ನಡೆದಿದ್ದು, ಮೇ 21ರವರೆಗೂ ಮುಂದುವರಿಸುವ ನಿರ್ಧಾರಕ್ಕೆ ಬರಲಾಗಿದೆ.

2023ರ ಮೇ 22ರಂದು ಡಿಜಿ-ಐಜಿಪಿಯಾಗಿದ್ದ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದರು. ಅವರಿಂದ ಖಾಲಿಯಾದ ಹುದ್ದೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಡಿಜಿಪಿಯಾಗಿದ್ದ ಡಾ. ಅಲೋಕ್ ಮೋಹನ್ ಅವರಿಗೆ ಡಿಜಿ-ಐಜಿಪಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.

ಹೊಸ ಡಿಜಿ-ಐಜಿಪಿ ನೇಮಕದ ವರದಿಯನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳುಹಿಸಿ ಒಪ್ಪಿಗೆ ಪಡೆಯುವಲ್ಲಿ ಸರ್ಕಾರ, 4 ತಿಂಗಳು ವಿಳಂಬ ಮಾಡಿತ್ತು. 2023ರ ಜು.25ರಂದು ಆಯೋಗದಿಂದ ಒಪ್ಪಿಗೆ ಪಡೆದ ಸರ್ಕಾರ 2023ರ ಆ.19ರಂದು ಡಾ.ಅಲೋಕ್ ಮೋಹನ್ ಅವರನ್ನು ನೇಮಕ ಮಾಡಿ ಹೊಸ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಸುಪ್ರೀಂ ಕೋರ್ಟ್‌ನ 2018-19ರ ಸೂಚನೆಯಂತೆ ಆದೇಶ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಅಂದರೆ ಸುಪ್ರೀಂ ಕೋರ್ಟ್ ಈ ಮೊದಲು ಡಿಜಿ-ಐಜಿಪಿ ಹುದ್ದೆಯನ್ನು 2 ವರ್ಷ ಪೂರ್ಣಾವಧಿಗೆ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಸೂಚಿಸಿತ್ತು. ಅದರಂತೆ ಡಾ. ಅಲೋಕ್ ಮೋಹನ್ ಅವರನ್ನು ನೇಮಕ ಮಾಡಲಾಗಿದೆ. ಆಗಸ್ಟ್‌ವರೆಗೂ ಇವರೇ ಮುಂದುವರಿಯುತ್ತಾರೆ ಎಂಬ ಚರ್ಚೆಗಳೂ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net