

| ಶಿವಶರಣೆ ಡಾ.ನೀಲಮ್ಮ ತಾಯಿ ಅಸುಂಡಿ, ಅಧ್ಯಾತ್ಮ ವಿದ್ಯಾಶ್ರಮ, ಆದಿಶಕ್ತಿನಗರ, ಗದಗ.
ಮಠಕ್ಕೆ ಭಕ್ತರು ಬೇಕು, ಶಾಲೆಗೆ ವಿದ್ಯಾರ್ಥಿಗಳು ಬೇಕು, ಆಸ್ಪತ್ರೆಗೆ ರೋಗಿಗಳಿರ ಬೇಕು, ನ್ಯಾಯಾಲಯಕ್ಕೆ ವಕೀಲರಿರಬೇಕು, ಕೋರ್ಟಿಗೆ ಕಕ್ಷಿದಾರರಿರಬೇಕು, ಹೊಲಗದ್ದೆಗೆ ರೈತರಿರಬೇಕು, ಅಂಗಡಿಗಳಿಗೆ ಗಿರಾಕಿಗಳಿರಬೇಕು, ಮನೆಗೆ ಯಜಮಾನನಿರಬೇಕು, ಸತಿಗೆ ಪತಿಯಿರಬೇಕು, ಶಿಷ್ಯರಿಗೆ ಗುರುವಿರಬೇಕು, ಗುರುವಿಗೆ ಗುರುತ್ವವಿರಬೇಕು.
ಹಾಗೇ ದೇವನಿಗೆ ಭಕ್ತರಿರಬೇಕು, ಭಕ್ತನಿಂದಲೇ ದೇವ ದೊಡ್ಡವನೆನಿಸಿಕೊಂಡಿರುವ ತೆರಹಿಲ್ಲದ (ಓತೋಪ್ರೋತವಾಗಿ ತುಂಬಿರುವ) ನಿರಾಕಾರ ಘನವು ಸಾಕಾರಕ್ಕೆ ಬಂದು ಒಡಲುಗೊಂಡು ಲೋಕದಲ್ಲಿ ಸಂಚಾರಕೈಕೊಂಡು ದೇಶಾಂತರಿಯಾಗಿ ಸಂಚರಿಸುತ್ತಿರುವ ಕಾರಣವೇನು?. ಕುರುಹಿಲ್ಲದ ಪರವಸ್ತು ಕುರುಹಿಂಗೆ ಬಂದು ಗುರುವೆಂಬ ನಾಮಧರಿಸಿ ಸಂಚರಿಸುತ್ತಿರುವುದರಿಂದಲೇ, ಭಕ್ತಕೋಟಿಯ ಶಕ್ತಿ (ತನು ಮನ ಇಂದ್ರಿಯಂಗಳ) ಕೆಳಮುಖವಾಗಿ ಸಂಸಾರವಿಲಾಸದಲ್ಲಿ ಹರಿಯುತ್ತ ಭವಸಮುದ್ರಕ್ಕೆ ಸೇರ್ಪಡೆಯಾಗುತ್ತಿರುವದನ್ನು ತಪ್ಪಿಸಿ,
ಶಿವಮುಖವಾಗಿ ಮೇಲುಗಡೆ ಮುಕ್ತಿವಿಲಾಸದತ್ತ ಕರೆದೊಯ್ಯುವ ಕರುಣಾಳು ಬೆಳಕು ಗುರುದೇವರು. ಆ ದೇವನ ಶಕ್ತಿಯೇ ಗುರುರೂಪದಲ್ಲಿ, ವಿಗ್ರಹರೂಪದಲ್ಲಿ ಧರೆಗೆ ಅವತರಿಸುತ್ತದೆ. ಭೋದಿಸಿದಲ್ಲಿ ಗುರು ಪೂಜಿಸಿದಲ್ಲಿ ಲಿಂಗ (ವಿಗ್ರಹ) ಮೂರ್ತಿಯ ಮಹಾವೈಭವವನ್ನು ಕೊಂಡಾಡುವುದರಿಂದ ಮಂತ್ರ, ಸ್ತೋತ್ರ, ಪದ, ಪದ್ಯಗಳಾದವು.
ವೇದ ನಾದಕ್ಕೆ ಸ್ತೋತ್ರ, ಪದ್ಯಕ್ಕೆ ನಿಲುಕದ ಆ ಪರಮಾತ್ಮನ ನಿಲುವು ಆ ಪದಪದ್ಯಗಳಿಂದ ಹೊರ ಹೊಮ್ಮುವ ಹೃದಯ ರಸ, ಅದುವೇ ಭಕ್ತಿಯರಸ- ರಸೋವೈಸಃ ಆ ರಸಕ್ಕೆ, ವಿಗ್ರಹರೂಪ ದಲ್ಲಿರುವ ದೇವರು ಒಲಿಯದಿರುವನೇ? ಬಾಣ ಮಯೂರು, ಹಲಾಯುಧ, ಕಾಳಿದಾಸ, ಕನಕದಾಸ ಮೊದಲಾದವರು ಸ್ತುತಿಸಿ ಭಜಿಸಿ ಪೂಜಿಸಿದ್ದರಿಂದ ದೇವ ಒಲಿದು ಬಿಟ್ಟ. ದೇವನ ಅಸ್ತಿತ್ವ ಅತೀತವಾದದ್ದು.
ಅಖಂಡ ಪರಿಪೂರ್ಣ ಬೆಳಗುಗಳಿಗೆಲ್ಲ ಮಹಾಬೆಳಗಾದ ಆ ಘನವಸ್ತು ಪರಮಾತ್ಮನನ್ನು ಭಕ್ತನು ತನ್ನ ಭಕ್ತಿಯಿಂದಾಗಿ ಮೂರ್ತಿ ರೂಪದಲ್ಲಿ (ವಿಗ್ರಹ) ಸಣ್ಣವನ್ನನಾಗಿಸಿರಿದ. ಭಕ್ತನ ಭಕ್ತಿಯ ಆಹಾರವನ್ನು ಸ್ವೀಕರಿಸುವರಾರು? ಯಾರಿಗೆ ಭಕ್ತಿ ಸಲ್ಲಿಸಬೇಕು? ದೇವನ ಮಹಿಮೆಯನ್ನು ಅವನ ಅಪಾರ ಐಶ್ವರ್ಯವನ್ನು ಹಾಡಿಕೊಂಡಾಡಿ ಭಜಿಸುವರಾರು? ದೇವನ ಶಕ್ತಿ ಅರ್ಥವಾಗುವದೇ ಭಕ್ತನಿಂದ. ಭಕ್ತನಿಲ್ಲವಾದರೆ ದೇವನ ಕಾರ್ಯನಡೆಯದು. ಹೊಳೆದಾಟಲು ಹರಗೋಲು ಬೇಕು, ಹರಗೋಲಿಗೆ ಹುಟ್ಟು ಬೇಕು. ಹೀಗಾಗಿ ಹುಟ್ಟಿಗೂ ಹರಗೋಲಿಗೂ, ಭಕ್ತನಿಗೂ ಭಗವಂತನಿಗೂ ಅನನ್ಯ ಸಂಬಂಧವಿದೆ.