

ಶಿಕಾರಿಪುರ: ಭಾರತ ಹುಣ್ಣಿಮೆ ಬಂತೆಂದರೆ ಸಾಕು ಶ್ರೀ ಮೈಲಾರಲಿಂಗೇಶ್ವರನ ಭಕ್ತರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ. ತಾಲೂಕಿನ ವಿವಿಧೆಡೆಯಿಂದ ಭಕ್ತರು ಎತ್ತಿನಗಾಡಿಯಲ್ಲಿಯೇ ಮೈಲಾರದಲ್ಲಿ ನಡೆಯುವ ಕಾರಣಿಕಕ್ಕೆ ಮಂಗಳವಾರ ತೆರಳಿದರು.
ಮುಂಜಾನೆಯೇ ಸಾಂಪ್ರದಾಯಿಕವಾಗಿ ಶ್ರೀ ಮೈಲಾರಲಿಂಗೇಶ್ವರನ ಪೂಜೆ ಮುಗಿಸಿಕೊಂಡು ಕೆಲವರು ಎತ್ತಿನಗಾಡಿ, ವಾಹನಗಳಲ್ಲಿ ಹೊರಟರು. ಜತೆಗೆ ಅಡುಗೆ ಪದಾರ್ಥಗಳು, ಅಗತ್ಯ ವಸ್ತುಗಳು ಹಾಗೂ ಸೇವೆಯ ವಸ್ತುಗಳನ್ನು ತೆಗೆದುಕೊಂಡಿದ್ದರು.
ಮೊದಲು ಶ್ರೀಕ್ಷೇತ್ರ ದೇವರಗುಡ್ಡಕ್ಕೆ ತೆರಳಿ ಶ್ರೀ ಮಲ್ಲಾರಿ ಮಾಲಸಾಮಾತಾರ್ಂಡ ಭೈರವ ಅಂದರೆ ಗುಡದಯ್ಯ ಗಂಗಮಾಳವ್ವನ ದರ್ಶನ ಮಾಡಿಕೊಂಡು ನಂತರ ಗುಡ್ಡದ ಕೆಳಗೆ ಬಂದು ರಣದವ್ವ ದೇವಸ್ಥಾನದ ಹತ್ತಿರ ಅಡುಗೆ ಸಿದ್ಧಪಡಿಸಿ ನೈವೇದ್ಯ ಮಾಡುತ್ತಾರೆ. ನಂತರ ಊಟ ಮಾಡಿ ಮೈಲಾರ ತಲುಪುತ್ತಾರೆ.
ಶ್ರೀ ಮೈಲಾರಲಿಂಗೇಶ್ವರ ನಮ್ಮ ಕುಲದೇವರು. ತಲೆತಲಾಂತರಗಳಿಂದ ಶಿಕಾರಿಪುರದಿಂದ ಸಾಕಷ್ಟು ಭಕ್ತರು ಎತ್ತಿನಗಾಡಿಯಲ್ಲಿ ಕಾರಣಿಕಕ್ಕೆ ಹೋಗುತ್ತಾರೆ. ಇದು ನಮ್ಮ ಕುಲದ ಸಂಪ್ರದಾಯ ಎನ್ನುತ್ತಾರೆ ಯಂಕಣ್ಣಾರ ನಿಂಗೋಜಿ ರಾವ್.