

ಹನೂರು : ಮಲೆಮಹದೇಶ್ವರ ಬೆಟ್ಟದಲ್ಲಿ ಕೊನೆಯ ಕಾರ್ತಿಕ ಸೋಮವಾರದಂದು ಜರುಗುವ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಳೆದ 2 ದಿನಗಳಿಂದ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ.
ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಈಗಾಗಲೇ ಮಾದಪ್ಪನ ಸನ್ನಿಧಿಯಲ್ಲಿ 3 ಸೋಮವಾರಗಳಂದು ವಿಶೇಷ ಪೂಜೆಯನ್ನು ಸಲ್ಲಿಸಲಾಗಿದ್ದು, ಸಾವಿರಾರು ಭಕ್ತರು ಭೇಟಿ ನೀಡಿದ್ದರು. ದೇವರ ದರ್ಶನ ಪಡೆದು ವಿವಿಧ ಉತ್ಸವಾದಿ ಸೇವೆಗಳಲ್ಲಿ ಭಾಗಿಯಾಗಿದ್ದರು. ಕೊನೆಯ ಸೋಮವಾರ(ನ.25) ಬೆಳಗ್ಗೆ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ರಾತ್ರಿ ದೀಪದಗಿರಿ ಒಡ್ಡುವಿನಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೀಪೋತ್ಸವ(ಮಹಾಜ್ಯೋತಿ ದರ್ಶನ) ವಿಜೃಂಭಣೆಯಿಂದ ಜರುಗಲಿದೆ. ಹಾಗಾಗಿ ಪ್ರತಿ ವರ್ಷದಂತೆ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಾಮರಾಜನಗರ ಸೇರಿದಂತೆ ನಂಜನಗೂಡು, ನರಸೀಪುರ, ಮೈಸೂರು, ಮದ್ದೂರು, ಮಳವಳ್ಳಿ ಇನ್ನಿತರ ಕಡೆಗಳಲ್ಲಿ ಹೆಚ್ಚಿನ ಭಕ್ತರು ಕಳೆದ 2 ದಿನಗಳಿಂದ ತಂಡೋಪತಂಡವಾಗಿ ಹನೂರು ಮಾರ್ಗವಾಗಿ ಕಾಲ್ನಡಿಗೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾರೆ.
ಮಾದಪ್ಪನ ದೇವರ ಗುಡ್ಡರು ಹಾಡನ್ನು ಹಾಡುವುದರ ಜತೆಗೆ ಕಂಸಾಳೆ ಬಾರಿಸುತ್ತಾ ಸಾಗುತ್ತಿದ್ದರೆ, ಯುವಕರು ಮಾದಪ್ಪನಿಗೆ ಜಯಘೋಷಗಳನ್ನು ಮೊಳಗಿಸುತ್ತಾ ಉತ್ಸಾಹದಿಂದ ಶ್ರೀ ಕ್ಷೇತ್ರಕ್ಕೆ ಪಯಣ ಬೆಳೆಸಿದ್ದಾರೆ. ಮಾರ್ಗದ ಅಲ್ಲಲ್ಲಿ ಅಡುಗೆ ತಯಾರಿಸಿ ಊಟ ಸೇವಿಸಿ ವಿಶ್ರಾಂತಿ ಪಡೆಯುವುದರ ಮೂಲಕ ತೆರಳುತ್ತಿರುವ ಭಕ್ತರು ಭಾನುವಾರ ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ಮಹದೇಶ್ವರ ಬೆಟ್ಟಕ್ಕೆ ತಲುಪಿ ದೇವರ ದರ್ಶನ ಪಡೆದು ದೀಪೋತ್ಸವದಲ್ಲಿ ಭಾಗಿಯಾಗಲಿದ್ದಾರೆ.