ಶಬರಿಮಲೆಯಲ್ಲಿ ಭಕ್ತರ ಪರಿಸ್ಥಿತಿ ದಯನೀಯ; ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Shabarimala Protest
Published on

ಕೊಚ್ಚಿ: ಕೇರಳದ ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಳೆದ ಕೆಲ ದಿನಗಳಿಂದ ವ್ಯವಸ್ಥೆ ಹದಗೆಟ್ಟಿದ್ದು, ಎರಡು ದಿನಗಳಿಂದ ಪರಿಸ್ಥಿತಿ ಸಂಪೂರ್ಣವಾಗಿ ಬಿಗಡಾಯಿಸಿದೆ. ಯಾತ್ರಿಕರು ತಂಗಲು ಸರಿಯಾದ ಆಶ್ರಯ, ಸೇವಿಸಲು ಊಟ, ತಿಂಡಿ, ನೀರೂ ಸಿಗದೆ ಪರದಾಟ ನಡೆಸುವಂತಾಗಿದೆ.

ಈ ತಿಂಗಳ 6ನೇ ತಾರೀಕಿನಿಂದ ಕ್ಷೇತ್ರಕ್ಕೆ ಆಗಮಿಸುತ್ತಿರುವ ಯಾತ್ರಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದ್ದು, ಸರಿಯಾಗಿ ವ್ಯವಸ್ಥೆ ಒದಗಿಸಲು ದೇವಸ್ಥಾನ ಆಡಳಿತ ಮಂಡಳಿ ಮತ್ತು ಸರ್ಕಾರಕ್ಕೆ ಸಾಧ್ಯವಾಗದ್ದರಿಂದ ಈ ಅವ್ಯವಸ್ಥೆ ಉಂಟಾಗಿದೆ. ದೇವರ ದರ್ಶನಕ್ಕೆ ಸರದಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. 18-20 ಗಂಟೆಗಳ ಕಾಲ ಕಾದಿದ್ದೇವೆ ಎಂದು ಕೆಲವು ಯಾತ್ರಿಗಳು ಹೇಳಿದ್ದಾರೆ. ಕಾದುಕಾದು ಬೇಸತ್ತ ಕೆಲವರು ಬ್ಯಾರಿಕೇಡ್ ಹಾರಿ ಮುಂದೆ ಹೋಗಲು ಯತ್ನಿಸಿದ್ದರಿಂದ ಕಾಲ್ತುಳಿತ ಕೂಡ ಉಂಟಾಗಿತ್ತು.

ಹೈಕೋರ್ಟ್ ಮಧ್ಯಪ್ರವೇಶ: ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಟ್ರಾವಂಕೋರ್ ದೇವಸ್ವಂ ಬೋರ್ಡ್ ಭಕ್ತರಿಗೆ ಸ್ವಯಂಸೇವಕರು ಇಲ್ಲವೇ ಸ್ಥಳೀಯ ಸಂಸ್ಥೆಗಳ ಮೂಲಕ ನೀರು-ಬಿಸ್ಕತ್ತು ವಿತರಿಸಲು ಆಲೋಚಿಸಬೇಕು. ಅತಿಯಾದ ಜನಸಂದಣಿ ಉಂಟಾಗದಂತೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದೂ ಹೈಕೋರ್ಟ್ ಹೇಳಿದೆ.

ಪರಿಸ್ಥಿತಿ ಉಲ್ಬಣಿಸಲು ಕಾರಣ?: ಶಾಸಕ ತಿರುವಂಚೂರ್ ರಾಧಾಕೃಷ್ಣನ್ ನೇತೃತ್ವದ ಯುಡಿಎಫ್ ಸಮಿತಿ ನಿಲಕ್ಕಲ್ ಮತ್ತು ಪಾಂಬಾ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದೆ. ಪಾಂಬಾದಲ್ಲಿ ಯಾತ್ರಿಕರು 8-9 ಗಂಟೆ ಬಿಸಿಲಿನಲ್ಲಿ ನೀರು ಆಹಾರ ಇಲ್ಲದೆ ಕಾಯುವಂತಾಗಿದೆ. ಬಸ್​ನಲ್ಲಿ ನೂರಾರು ಮಂದಿಯನ್ನು ತುಂಬಿಕೊಂಡು ಹೋಗಲಾಗುತ್ತಿದೆ. ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪಾಂಬಾದಲ್ಲಿ ಏಕಕಾಲದಲ್ಲಿ 15 ಸಾವಿರ ಮಂದಿ ತಂಗುವಂಥ ವ್ಯವಸ್ಥೆಯೊಂದು ಇದ್ದಿದ್ದು, ಇದು 2018ರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಸದ್ಯ ಇಲ್ಲಿ ಕೇವಲ 2 ಚಿಕ್ಕ ವಸತಿಗೃಹಗಳಷ್ಟೇ ಇವೆ. ಹೀಗಾಗಿ ಅವ್ಯವಸ್ಥೆ ಉಂಟಾಗಿದೆ. ಭಕ್ತರಿಗೆ ಆಗಿರುವ ಅವ್ಯವಸ್ಥೆಯಿಂದ ಮಾನವಹಕ್ಕುಗಳ ಉಲ್ಲಂಘನೆ ಆಗಿದ್ದು, ಈ ಕುರಿತು ಕಾನೂನುಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಶಾಸಕ ರಾಧಾಕೃಷ್ಣನ್ ತಿಳಿಸಿದ್ದಾರೆ. ಚೆನ್ನೈನಲ್ಲಿ ಚಂಡಮಾರುತ ಪರಿಣಾಮವಾಗಿ ನೀರು ನಿಂತಿದ್ದರಿಂದ ಡಿಸೆಂಬರ್ ಮೊದಲ ವಾರದಲ್ಲಿ ಕೇರಳಕ್ಕೆ ಸಂಚರಿಸುವ ಹಲವು ರೈಲುಗಳು ಸ್ಥಗಿತಗೊಂಡಿದ್ದವು. ಈಗ ಅವರೆಲ್ಲ ಒಟ್ಟಿಗೆ ಬರಲಾರಂಭಿಸಿದ್ದರಿಂದಲೂ ಈ ಯಾತ್ರಿಕರ ಸಂಖ್ಯೆ ಹೆಚ್ಚಾಗಿದ್ದು ಕೂಡ ಇದಕ್ಕೆ ಕಾರಣ. ದಿನಕ್ಕೆ 80 ಸಾವಿರದಂತೆ ಯಾತ್ರಿಕರು ಬರುತ್ತಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ನಿಯಂತ್ರಣ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ತುರ್ತು ಸಭೆ ಕರೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವರ್ಚುವಲ್ ಕ್ಯೂ ಬುಕಿಂಗ್ 10 ಸಾವಿರಕ್ಕೆ ಮಿತಿಗೊಳಿಸುವ ಜತೆಗೆ ದರ್ಶನದ ಅವಧಿ ಒಂದು ಗಂಟೆ ವಿಸ್ತರಿಸಲೂ ನಿರ್ಧರಿಸಲಾಗಿದೆ.

| ಪಿಣರಾಯಿ ವಿಜಯನ್ ಕೇರಳ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net