

ತಿರುಪತಿ: ಸಾಲು ಸಾಲು ರಜೆಗಳ ಕಾರಣ ಶನಿವಾರ ತಿರುಪತಿ-ತಿರುಮಲೆಗೆ ಭಕ್ತಸಾಗರ ಹರಿದುಬಂದಿದೆ. ಶ್ರೀವೆಂಕಟರಮಣಸ್ವಾಮಿ ದರ್ಶನಕ್ಕೆ 5ಕಿಮೀ ತನಕ ಸರದಿ ಸಾಲಿನಲ್ಲಿ ಭಕ್ತರು ನಿಂತಿದ್ದಾರೆ. ಟೋಕನ್ ಇಲ್ಲದವರಿಗೆ ಕನಿಷ್ಠ 48ಗಂಟೆ ನಂತರ ಬಾಲಾಜಿ ದರ್ಶನವಾಗುತ್ತಿದೆ.
ತಿರುಪತಿಯಿಂದ ತಿರುಮಲೆಯ ಏಳು ಬೆಟ್ಟಕ್ಕೆ ತೆರಳಲು ಪ್ರವೆಶದ್ವಾರವಿರುವ ಅಲಿಪಿರಿ ಪ್ರದೇಶದಲ್ಲಿ ಕಣ್ಣಾಯಿಸಿದಷ್ಟೂ ದೂರ ಕಾರು, ಬಸ್ ಮತ್ತಿತರ ವಾಹನಗಳೇ ಕಾಣಸಿಗುತ್ತವೆ. ಅಲ್ಲಿಂದ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ತನಕ ಹೆದ್ದಾರಿಯ ಎರಡೂ ಬದಿ ಕರ್ನಾಟಕ, ತಮಿಳು ನಾಡು ವಾಹನಗಳು ಸುಮಾರು 10 ಕಿಲೋಮೀಟರ್ ತನಕ ನಿಂತಿವೆ. ಅಲಿಪಿರಿ ಕಡೆ ಬರುವ ಯಾವುದೇ ಮಾರ್ಗದಲ್ಲೂ ಸಂಚಾರ ಕಷ್ಟಸಾಧ್ಯವಾಗಿದೆ.
ಇನ್ನು ಬೆಟ್ಟದ ಮೇಲೆ ತಿರುಮಲೆಯಲ್ಲಿ ವೈಕುಂಠ ಕ್ಯೂ ಕಾಂಪ್ಲೆಕ್ಸ್ 1 ಮತ್ತು 2, ನಾರಾಯಣಗಿರಿ ಸೇರಿ ಎಲ್ಲೆಡೆ ಭಕ್ತರು ತುಂಬಿ ತುಳುಕುತ್ತಿದ್ದಾರೆ. ದೇವರ ದರ್ಶನಕ್ಕೆ ನಿಂತಿರುವ ಜನರ ಕ್ಯೂ ನಂದಕಂ ವಿಶ್ರಾಂತಿ ಭವನದ ಆಚೆ 5 ಕಿಮೀ ತನಕ ಇದೆ. ಸಹಸ್ರಾರು ಭಕ್ತರು ಆಗಮನದ ಹಿನ್ನೆಲೆಯಲ್ಲಿ ದರ್ಶನ ಸೇರಿ ಪ್ರಸಾದ, ವಸತಿ ಮತ್ತಿತರ ಮೂಲಸೌಲಭ್ಯಗಳನ್ನು ಒದಗಿಸಲು ಟಿಟಿಡಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಟಿಟಿಡಿ ಸಿಬ್ಬಂದಿ ಜತೆಗೆ 2500 ಮಂದಿ ಬಾಲಾಜಿ ಸೇವಕರನ್ನು ಭಕ್ತರ ನಿಯಂತ್ರಣ ಮತ್ತು ಸೇವೆಗಳನ್ನು ಒದಗಿಸಲು ನಿಯೋಜಿಸಲಾಗಿದೆ.
ಇದನ್ನೂ ಓದಿ
2ದಿನ ಕಾದರಷ್ಟೇ ದರ್ಶನ: ಸೆ.30ರಂದು ಶ್ರೀ ವೆಂಕಟರಮಣಸ್ವಾಮಿ ದರ್ಶನಕ್ಕೆ ಟೋಕನ್ ಇಲ್ಲದ ಭಕ್ತರಿಗೆ 48ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡಿದೆ. ಸುದರ್ಶನ ಟಿಕೆಟ್ ಹೊಂದಿದ ಭಕ್ತರಿಗೆ 7ಗಂಟೆ, ಪ್ರತ್ಯೇಕ ಪ್ರವೇಶ ದರ್ಶನಕ್ಕೆ 5ಗಂಟೆ ತೆಗೆದುಕೊಳ್ಳುತ್ತಿದೆ. ಇದೇ ಪರಿಸ್ಥಿತಿ ಇನ್ನೂ 3ದಿನ ಮುಂದುವರಿಯುವ ಸಾಧ್ಯತೆಯಿದ್ದು, ಯಾತ್ರೆ ಕೈಗೊಳ್ಳುವ ಭಕ್ತರು ಇದನ್ನು ಗಮನಿಸಬೇಕು ಎಂದು ಟಿಟಿಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ವಿ.ಧರ್ಮಾರೆಡ್ಡಿ ತಿಳಿಸಿದ್ದಾರೆ.