ಭವಿ-ಭಕ್ತ

Basavanna
Published on

ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಒಂದು ಗಂಡು, ಒಂದು ಹೆಣ್ಣು ಎಂದು ಎರಡು ಜಾತಿ ಹೇಳುವ ರೂಢಿ ಇದೆ. ಶರಣ ತತ್ವ ಸಿದ್ಧಾಂತದಲ್ಲಿ ಒಂದು ಭವಿ-ಒಂದು ಭಕ್ತಿ ಎಂಬ ಎರಡು ಇವೆ. ಅದನ್ನು ಶರಣ ಗಣದಾಸಿ ವೀರಣ್ಣ ಹೀಗೆ ತಿಳಿಸಿರುತ್ತಾರೆ: ಕುಲ ಎಷ್ಟು ಎಂದರೆ ಎರಡು. ಅವು ಯಾವವು ಎಂದರೆ ಭವಿ ಮತ್ತು ಭಕ್ತಿ. ಭಕ್ತ ಬದುಕಲು ಅಷ್ಟಾವರಣವೇ ಲಿಂಗವಾಗಿ ಪಂಚಾಚಾರವೇ ಪ್ರಾಣವಾಗಿ ಭಕ್ತರ ಕುಲವನಾರಿಸಿದರೆ ಬಾರದ ಭವಂಗಳಲ್ಲಿ ಬಪ್ಪದು ತಪ್ಪದು. ನೀರಿಂದಾದ ಮುತ್ತು ಮರಳಿ ಉದಕವಪ್ಪುದೇ? ಆಕಾಶಕ್ಕೆ ಹಾರಿಹೋದ ಜ್ಯೋತಿ ಹಿಂದಕ್ಕೆ ಬಪ್ಪುದೇ? ಮೃತ್ಯುವಿನಿಂದಾದ ಮಡಕೆ ಮರಳಿ ಮಣ್ಣಪ್ಪುದೇ? ಮತ್ತೆ ವಾಮ ಮುನಿ ಹಿರಿಯ ಭಕ್ತರ ಮನೆಯ ಭಿನ್ನಹವ ಕೈಗೊಂಡು ಕುಲಕ್ಕಂಜಿ ಉಣ್ಣದೇ ಹೋದ ನಿಮಿತ್ತದಿಂದ ಹಾವಿನ ಹಾಳದ ಕಲ್ಲಯ್ಯಗಳ ಮನೆಯಲ್ಲಿ ಶ್ವಾನನಾಗಿ ಹುಟ್ಟಲಿಲ್ಲವೇ? ಇದು ಕಾರಣ ಶಿವಭಕ್ತರ ರೊಕ್ಕು ಮಿಕ್ಕ ಪ್ರಸಾದವ ಕೊಳ್ಳಬೇಕು ಎಂದಾತ ನಮ್ಮ ಶಾಂತ ಕೂಡಲ ಸಂಗಮದೇವಾ.

ಗಣದಾಸಿ ವೀರಣ್ಣನವರ ವಚನಗಳು ಹೆಚ್ಚು ಪ್ರಚಲಿತದಲ್ಲಿಲ್ಲ.ಪಾಲ್ಕುರಿಕೆ ಸೋಮನಾಥರ ಗಣಸಹಸ್ರ ನಾಮದಲ್ಲಿ ಇವರ ಹೆಸರು ಉಲ್ಲೇಖವಾಗಿರುವುದು. ಇವರು ಹಲವಾರು ವಚನಗಳನ್ನು ಬರೆದಿದ್ದಾರೆ. ವಚನದ ಅಂಕಿತನಾಮ ನಮ್ಮ ಶಾಂತ ಕೂಡಲ ಸಂಗಮದೇವಾ. ಇವರ ವಚನದಲ್ಲಿ ಆಳವಾದ ಚಿಂತನೆ ಹಾಗೂ ಅನುಭವ ಇದೆ. ಈ ವಚನದಲ್ಲಿ ಅಷ್ಟಾವರಣ ಲಿಂಗ ಪಂಚಾಚಾರ ಪ್ರಣವಾಗಿ ಆಚರಿಸಿ ನಡೆಯುವ ಭಕ್ತರ ಕುಲವನರಿಸಿದರೆ ಭವಂಗಳಲ್ಲಿ ಬರುವುದು ತಪ್ಪದು. ಅದ್ಹೇಗೆ ಎಂದರೆ ನೀರಿನಿಂದಾದ ಮುತ್ತು ಮತ್ತೆ ಮರಳಿ ನೀರಾಗುವುದಿಲ್ಲ ಇತ್ಯಾದಿ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರಾದಿಯಾಗಿ ಎಲ್ಲ ಶರಣರು ಸತ್ಯ ಶುದ್ಧ ಕಾಯಕ ಮಾಡಿ ಅದರಿಂದ ಬಂದುದರಿಂದ ದಾಸೋಹ ಮಾಡಿ ಒಕ್ಕು ಮಿಕ್ಕ ಪ್ರಸಾದ ತೆಗೆದುಕೊಳ್ಳುವುದನ್ನು ಆಚರಣೆಯಲ್ಲಿ ತಂದರು. ಅಲ್ಲಿ ಕುಲಜಾತಿ ಎಣಿಸಲಾರದೆ ಭವಿ-ಭಕ್ತಿ ಎರಡೇ ಎಂಬ ಸಿದ್ಧಾಂತದಿಂದ ಜೀವನ ಸಾಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net