ಗಡಿ ಚೆಂಡು ಕೇಂದ್ರದ ಅಂಗಳಕ್ಕೆ; ಮಧ್ಯಸ್ಥಿಕೆ ವಹಿಸಲು ಫಡ್ನವೀಸ್ ಆಗ್ರಹ | ಅಮಿತ್ ಷಾ ಜತೆ ಮಾತುಕತೆ

874
Published on

ಮುಂಬೈ: ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಬಗೆಹರಿಸಬೇಕೆಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಬುಧವಾರ ಚರ್ಚೆ ನಡೆಸಿದ ಅವರು, ಕಳೆದೊಂದು ವಾರದಿಂದ ಕರ್ನಾಟಕದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳಲ್ಲಿನ ಅಹಿತಕರ ಘಟನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಫಡ್ನವೀಸ್ ಅಭಿಪ್ರಾಯಗಳನ್ನು ಷಾ ತಾಳ್ಮೆಯಿಂದ ಆಲಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ, ಅಮಿತ್ ಷಾ ಅವರೊಂದಿಗೆ ಮಾತನಾಡಿದ್ದರು.

ಈ ಮಧ್ಯೆ ಮಹಾರಾಷ್ಟ್ರ ನವನಿರ್ವಣ ಸೇನೆ (ಎಂಎನ್​ಎಸ್) ಅಧ್ಯಕ್ಷ ರಾಜ್ ಠಾಕ್ರೆ ಮಾತನಾಡಿ, ಗಡಿ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕದ ಜನರ ನಡುವಿನ ಬಾಂಧವ್ಯ ತುಂಬಾ ಗಟ್ಟಿಯಾಗಿದೆ. ಗಡಿಯ ಎರಡೂ ಬದಿ ಅವರ ಕುಟುಂಬ ದೇವತೆಗಳಿವೆ ಎಂದು ಠಾಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗಡಿ ಸಮಸ್ಯೆಯನ್ನು ಕೆರಳಿಸಲಾಗುತ್ತಿದೆ ಮತ್ತು ಮಹಾರಾಷ್ಟ್ರವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಠಾಕ್ರೆ ಆರೋಪಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಇಲ್ಲಿಯ ಜನತೆಯ ಭಾವನೆಗಳನ್ನು ಪ್ರಚೋದಿಸುತ್ತಿರುವವರನ್ನು ನಿಯಂತ್ರಿಸಬೇಕು. ಕರ್ನಾಟಕ ಮುಖ್ಯಮಂತ್ರಿಗಳು ಕೂಡ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಠಾಕ್ರೆ ಮನವಿ ಮಾಡಿದ್ದಾರೆ.

‘ಬೆಳಗಾವಿ ಕೇಂದ್ರಾಡಳಿತ ಪ್ರದೇಶವಾಗಲಿ’: ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಕುರಿತು ಮಾತನಾಡಿರುವ ಶಿವಸೇನೆ ನಾಯಕ ಸಂಜಯ ರಾವತ್, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿ, ಗಡಿವಿವಾದಕ್ಕೆ ನಾಂದಿ ಹಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ದೆಹಲಿಯ ಸರ್ಕಾರದ ಬೆಂಬಲವಿಲ್ಲದೆ ಬೆಳಗಾವಿಯಲ್ಲಿ ಹಿಂಸಾಚಾರದ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

‘ನಾಲಿಗೆ ಹತೋಟಿಯಲ್ಲಿರಲಿ’: ಇದಕ್ಕೆ ಪ್ರತ್ಯುತ್ತರ ನೀಡಿರುವ ಅಬಕಾರಿ ಸಚಿವ ಶಂಭುರಾಜೆ ದೇಸಾಯಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ತಿಂಗಳು ಜಾಮೀನಿನ ಮೇಲೆ ಮುಂಬೈ ಜೈಲಿನಿಂದ ಬಿಡುಗಡೆಯಾಗಿರುವ ಶಿವಸೇನೆ ನಾಯಕ ಸಂಜಯ್ ರಾವತ್ ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ವಿಶ್ರಾಂತಿ ಪಡೆಯಬೇಕು ಗುಡುಗಿದ್ದಾರೆ.

ಕರ್ನಾಟಕ-ಮಹಾ ಸಾರಿಗೆ ಸಂಚಾರ ರದ್ದು
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕಾವು ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಉಭಯ ರಾಜ್ಯಗಳ ಸಾರಿಗೆ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರ ಹೊತ್ತಿಸಿದ ಗಡಿ ವಿವಾದದ ಕಿಡಿ ಮತ್ತು ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್​ಗಳಿಗೆ ಕಪ್ಪು ಮಸಿ ಬಳಿದು, ಕಲ್ಲು ತೂರಿದಿರುವುದನ್ನು ಖಂಡಿಸಿ ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆದು ‘ಮಹಾ’ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಯಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಕೂಡ ಕರ್ನಾಟಕ ಬಸ್​ಗಳಿಗೆ ಕಪ್ಪು ಮಸಿ ಬಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ಸಾರಿಗೆ ಬಸ್​ಗಳ ಸಂಚಾರ ಬುಧವಾರ ಸ್ಥಗಿತಗೊಂಡಿವೆ.

ಪ್ರತಿನಿತ್ಯ ಬೆಳಗಾವಿ, ಚಿಕ್ಕೋಡಿ ಮಾರ್ಗವಾಗಿ ವಾಯವ್ಯ, ಈಶಾನ್ಯ, ಕೆಎಸ್​ಆರ್​ಟಿಸಿ ವಿಭಾಗಗಳಿಂದ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ 591 ಸಾರಿಗೆ ಬಸ್​ಗಳು ಸಂಚಾರ ನಿಲ್ಲಿಸಲಾಗಿದೆ. ಅಲ್ಲದೆ, ಮಹಾರಾಷ್ಟ್ರದಿಂದ ರಾಜ್ಯದ ವಿವಿಧ ಭಾಗಗಳಿಗೆ ಬರುತ್ತಿದ್ದ ಮಹಾರಾಷ್ಟ್ರದ 244 ಬಸ್​ಗಳ ಸಂಚಾರ ಕೂಡ ಸ್ಥಗಿತಗೊಂಡಿದೆ. ಪರಿಣಾಮ ಎರಡು ರಾಜ್ಯಗಳ ಗಡಿಭಾಗದ ಹಳ್ಳಿಗಳ ಜನರು ದಿನ ನಿತ್ಯದ ವ್ಯಾಪಾರ-ವಹಿವಾಟು, ಆರ್ಥಿಕ ವ್ಯವಹಾರಕ್ಕೆ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳಲು ಸಮಸ್ಯೆ ಎದುರಿಸುವಂತಾಗಿದೆ. ಚಿಕ್ಕೋಡಿ ವಿಭಾಗದಿಂದ 195 ಬಸ್​ಗಳು, ಬೆಳಗಾವಿ ವಿಭಾಗದಿಂದ 250 ಬಸ್​ಗಳ ಸಂಚಾರ ಬಂದ್ ಮಾಡಲಾಗಿದೆ. ಇದರಿಂದಾಗಿ ಸುಮಾರು 40 ಲಕ್ಷ ರೂ. ನಷ್ಟವಾಗಿದೆ. ಗುರುವಾರ ಬಸ್ ಸಂಚಾರ ಆರಂಭವಾಗಲಿದೆ ಎಂದು ಸಾರಿಗೆ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ವಪಕ್ಷ ಸಭೆ ಸದ್ಯಕ್ಕೆ ಅನಗತ್ಯ

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯುವ ಪರಿಸ್ಥಿತಿ ಉದ್ಬವಿಸಿಲ್ಲ, ಅದರ ಅಗತ್ಯವೂ ಇಲ್ಲವೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದಂತೆ ರಾಜಕಾರಣ ಮಾಡುವುದು ಅಸಾಧ್ಯ. ಆಡಳಿತ ನಡೆಸುವವರಿಗೆ ಯಾವಾಗ ಏನು ಮಾಡಬೇಕೆಂದು ಗೊತ್ತಿದೆ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net