ಔರಂಗಜೇಬ್​ ವಿವಾದ & ನಾಗ್ಪುರ ಹಿಂಸಾಚಾರಕ್ಕೆ ಛಾವಾ ಸಿನಿಮಾವೇ ಕಾರಣ; ಸಿಎಂ ದೇವೇಂದ್ರ ಫಡ್ನವೀಸ್​ ಆರೋಪ | Devendra Fadnavis

Untitled design
Published on

ಮುಂಬೈ: ಮಹಾರಾಷ್ಟ್ರದಲ್ಲಿ ಔರಂಗಜೇಬನ ಕುರಿತಾದ ವಿವಾದ ಮತ್ತು ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಮಧ್ಯೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ಈ ಅಶಾಂತಿಗೆ ವಿಕ್ಕಿ ಕೌಶಲ್ ಅವರ 'ಛಾವಾ' ಸಿನಿಮಾ ಕಾರಣ ಎಂದು ಆರೋಪಿಸಿದ್ದಾರೆ. ಈ ಚಿತ್ರವು 17 ನೇ ಶತಮಾನದ ಮೊಘಲ್ ಚಕ್ರವರ್ತಿಯ ವಿರುದ್ಧ ಜನರನ್ನು ಕೆರಳಿಸಿದೆ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಫಡ್ನವೀಸ್, ಬಲಪಂಥೀಯ ಗುಂಪೊಂದು ಧಾರ್ಮಿಕ ಪುಸ್ತಕವನ್ನು ಸುಟ್ಟುಹಾಕಿದೆ ಎಂಬ ವದಂತಿ ಹರಡಿದ ನಂತರ ನಾಗ್ಪುರದಲ್ಲಿ ನಡೆದ ಹಿಂಸಾಚಾರ ಸಂಪೂರ್ಣವಾಗಿ ಪೂರ್ವ ಯೋಜಿತ ಮತ್ತು ಇದೆಲ್ಲವೂ ಪಿತೂರಿಯಂತೆ ಕಾಣುತ್ತಿದೆ ಎಂದು ಹೇಳಿದರು. ಹಿಂಸಾಚಾರದ ಸಮಯದಲ್ಲಿ ಗುಂಪು ಆಯ್ದ ಮನೆಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿರುವುದು ಹಠಾತ್ ಹಿಂಸಾಚಾರವಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂದು ತಿಳಿಸಿದರು.

ಮೊಘಲ್ ಚಕ್ರವರ್ತಿ ಔರಂಗಜೇಬನ ಬಗ್ಗೆ ಜನರಲ್ಲಿ 'ಕೋಪ' ಮೂಡಲು ಇತ್ತೀಚೆಗೆ ಛತ್ರಪತಿ ಸಂಭಾಜಿಯವರ ಜೀವನ ಚರಿತ್ರೆಯನ್ನೊಳಗೊಂಡ ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಸಿನಿಮಾ ಕಾರಣ. ಛಾವಾ ಚಿತ್ರವು ಔರಂಗಜೇಬ್ ವಿರುದ್ಧ ಜನರ ಕೋಪವನ್ನು ಹೊತ್ತಿಸಿದೆ ಎಂದು ಆರೋಪಿಸಿದರು. ಇದೇ ಸಮಯದಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದರು.

ಸೋಮವಾರ(ಮಾರ್ಚ್​ 17) ನಾಗ್ಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಅನೇಕ ವಾಹನಗಳು ಹಾನಿಗೊಳಗಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಕನಿಷ್ಠ 15 ಪೊಲೀಸ್ ಸಿಬ್ಬಂದಿ ಇದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ರಾಯಿಟರ್ಸ್​ ವರದಿ ಮಾಡಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಕರೆ ನೀಡಿದ ಸಿಎಂ ಫಡ್ನವೀಸ್ ಹಿಂಸಾಚಾರವನ್ನು ಟೀಕಿಸಿದ್ದಾರೆ. ಅಗತ್ಯವಿರುವ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿರುವುದಾಗಿ ಹೇಳಿದರು.

ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ನಾಗ್ಪುರದ ಹಲವು ಪ್ರದೇಶಗಳಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಿದ್ದಾರೆ. ಕೊತ್ವಾಲಿ, ಗಣೇಶಪೇಠ, ಲಕಡ್​​ಗಂಜ್, ಪಚ್ಪಾವೋಲಿ ಮತ್ತು ಶಾಂತಿ ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಪೊಲೀಸ್ ಆಯುಕ್ತ ಡಾ. ರವೀಂದರ್ ಕುಮಾರ್ ಸಿಂಘಾಲ್ ಘೋಷಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಕರ್ಫ್ಯೂ ಆದೇಶ ಮುಂದುವರಿಯುತ್ತದೆ ಎಂದು ತಿಳಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net