

ರಿಪ್ಪನ್‌ಪೇಟೆ: ಮಾನವನ ಬಾಳು ಉಜ್ವಲಗೊಳ್ಳಲು ಕ್ರಿಯಾಶೀಲ ಜೀವನ, ನಿರಂತರ ಶ್ರಮ ಮತ್ತು ಪ್ರಯತ್ನಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಶಿವಮಂದಿರ ನೂತನ ಕಟ್ಟಡದ ಉದ್ಘಾಟನೆ ಮತ್ತು ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ರಚನಾತ್ಮಕ ಸತ್ಕಾರ್ಯಗಳಿಂದ ಮಾತ್ರ ಸಮಾಜ ಮತ್ತು ಧರ್ಮ ಬಲಗೊಳ್ಳಲು ಸಾಧ್ಯ ಎಂದರು.
ಸಮಯ, ಸ್ನೇಹ ಮತ್ತು ಆರೋಗ್ಯ ಇವುಗಳಿಗೆ ಬೆಲೆ ಕಟ್ಟಲಾಗದು. ಬಡತನ ಮನುಷ್ಯನಿಗೆ ಇರಬೇಕೇ ಹೊರತು ಮನಸ್ಸಿಗೆ ಇರಬಾರದು. ಶ್ರೀಮಂತಿಕೆ ಮನಸ್ಸಿಗಿರಬೇಕೇ ಹೊರತು ಮನುಷ್ಯನಿಗೆ ಇರಬಾರದು. ವೀರಶೈವ ಧರ್ಮ ಕಾಯಕ ತತ್ವಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ. ಕಾಯಕವೇ ಚೈತನ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಕಾಯಕವೇ ಕೈಲಾಸವೆಂದು ಬಸವಣ್ಣ ಹೇಳಿದ್ದಾರೆ ಎಂದು ತಿಳಿಸಿದರು.
ಗುಣಾತ್ಮಕ ಚಿಂತನೆಗಳು ಶ್ರೇಯಸ್ಸಿಗೆ ಮೂಲ. ಮಾನಸಿಕ, ದೈಹಿಕವಾಗಿ ಸದೃಢನಾಗಿರುವ ವ್ಯಕ್ತಿ ಯಾರನ್ನೂ ಎಂದಿಗೂ ಅವಲಂಬಿಸಬೇಕಾಗಿಲ್ಲ. ಎಲ್ಲ ಕಡೆ ತಲೆ ಎತ್ತಿ ನಿಲ್ಲುವವನು ದೊಡ್ಡ ಮನುಷ್ಯ ಅಲ್ಲ. ಎಲ್ಲಿ ತಲೆ ತಗ್ಗಿಸಿ ನಿಲ್ಲಬೇಕು ಎಂಬುದನ್ನು ಗೊತ್ತಿರುವವನೇ ನಿಜವಾದ ದೊಡ್ಡ ಮನುಷ್ಯ ಎಂದರು.
ಭೋಜನಾಲಯ ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಈಗಾಗಲೇ ಶಿವಮಂದಿರ ನಿರ್ಮಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೆಲವು ಸಮಾಜಗಳ ಭವನ ಹಾಗೂ 92 ದೇವಾಲಯಗಳಿಗೆ ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಜನತೆ ಶಕ್ತಿ ನೀಡಿದ್ದಾರೆ. ಬಡ, ಮಧ್ಯಮ ವರ್ಗ ಹಾಗೂ ಸಾಮಾನ್ಯ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಮಳಲಿ ಸಂಸ್ಥಾನ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಡಾ. ಕೆ.ಬಿ.ಕಮಲಾಕರಪ್ಪ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ ಗಂಗಾಧರ್, ಜಿ.ಎಂ.ದುಂಡರಾಜಪ್ಪ ಗೌಡ, ಎಂ.ಆರ್.ಶಾಂತವೀರಪ್ಪ ಗೌಡ, ಎಂ.ಎಸ್.ಉಮೇಶ್ ಇತರರಿದ್ದರು.