

ಶಿವಮೊಗ್ಗ: ನಗರದಲ್ಲಿ ಹಸಿರೀಕರಣ, ಸೌಂದರ್ಯ ಹೆಚ್ಚಿಸಲು ಉದ್ಯಾನಗಳ ಅಭಿವೃದ್ಧಿ, ಬಡಾವಣೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದ, ಸೂರ್ಯ ಬಡಾವಣೆ ಹಾಗೂ ಸೋಮಿನಕೊಪ್ಪ ರಸ್ತೆಯ ಕೆಎಚ್‌ಬಿ ಕಾಲನಿ ಬಳಿ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಅವರೊಂದಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರಾಧಿಕಾರದ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ದೇವಸ್ಥಾನ ಪಕ್ಕದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಫೌಂಡೇಶನ್ ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಸಲಾಗುವುದು. ದಕ್ಷಿಣ ಭಾಗದಲ್ಲಿ ಫೌಂಡೇಶನ್ ರಹಿತ ಚೈನ್‌ಲಿಂಕ್ ಫೆನ್ಸಿಂಗ್ ಅಳವಡಿಕೆ, ಮೇಲ್ಛಾವಣಿಯೊಂದಿಗೆ ಯೋಗ ಮಂಟಪ ನಿರ್ಮಿಸಲಾಗುವುದು ಎಂದರು.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಜಿ-ಬ್ಲಾಕ್‌ನಲ್ಲಿ ಹೊರಾಂಗಣ ಸಾಮಗ್ರಿ ಅಳವಡಿಸಿರುವ ಉದ್ಯಾನಕ್ಕೆ ಸುತ್ತಲೂ ಗ್ರಿಲ್ ಫೆನ್ಸಿಂಗ್ ಅಳವಡಿಸುವ ಕಾಮಗಾರಿಯನ್ನು 20 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಗೊಳ್ಳಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಉದ್ಯಾನದ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಫೌಂಡೇಶನ್ ಸಹಿತ ಚೈನ್‌ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ, 35 ಮೀಟರ್ ವಾಯುವಿಹಾರ ಪಥ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಸೂಡಾ ಸದಸ್ಯರಾದ ಎಸ್.ಎಂ.ಸಿದ್ದಪ್ಪ, ಎಂ.ಪ್ರವೀಣ್‌ಕುಮಾರ್, ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ ಇತರರಿದ್ದರು.