ದೂರದೃಷ್ಟಿಯ ಶಿಕ್ಷಣ ನೀತಿಗಳಿಂದ ಕರ್ನಾಟಕ ಜ್ಞಾನಕೇಂದ್ರವಾಗಿ ಅಭಿವೃದ್ದಿ

 ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜು ಹಾಗೂ ಎಂಫಸಿಸ್ ಫೌಂಡೇಶನ್ ಸಹಯೋಗದಲ್ಲಿ ಕಾಲೇಜಿನ ಮುಖ್ಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ನಡೆದ ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿದರು.
ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜು ಹಾಗೂ ಎಂಫಸಿಸ್ ಫೌಂಡೇಶನ್ ಸಹಯೋಗದಲ್ಲಿ ಕಾಲೇಜಿನ ಮುಖ್ಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ನಡೆದ ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿದರು.
Published on
ಮಂಗಳೂರು: ಕರ್ನಾಟಕವು ದೇಶದ ತಾಂತ್ರಿಕ ಹಾಗೂ ಜ್ಞಾನಕೇಂದ್ರವಾಗಿ ಬೆಳೆದಿರುವುದಕ್ಕೆ ದೂರದೃಷ್ಟಿಯ ಶಿಕ್ಷಣ ನೀತಿಗಳೇ ಕಾರಣ. ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.
ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜು ಹಾಗೂ ಎಂಫಸಿಸ್ ಫೌಂಡೇಶನ್ ಸಹಯೋಗದಲ್ಲಿ ಕಾಲೇಜಿನ ಮುಖ್ಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ನಡೆದ ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಇತರ ತಾಂತ್ರಿಕ ಕೋರ್ಸ್‌ಗಳತ್ತವೂ ಗಮನ ಹರಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಗಳಲ್ಲಿಯೂ ಎಐ ತಂತ್ರಜ್ಞಾನವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬ ಕುರಿತು ಸಮಿತಿಗಳೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ, ಇಸ್ರೋ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಕರ್ನಾಟಕದಲ್ಲೇ ಬೆಳೆಯಲು ಇಲ್ಲಿನ ಸರ್ಕಾರಿ ನೀತಿಗಳೇ ಕಾರಣ. ಶಿಕ್ಷಣದ ಬಲಿಷ್ಠತೆಗೆ ರಾಜ್ಯದ ಪರಿಸರವೂ ಕಾರಣವಾಗಿದೆ. ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ವಿದ್ಯಾಸಂಸ್ಥೆಯಲ್ಲಿ ಇಂಡಸ್ಟ್ರಿ, ಅಕಾಡೆಮಿಕ್ಸ್ ಮತ್ತು ಕೌಶಲ್ಯಾಧಾರಿತ ಕೋರ್ಸ್‌ಗಳ ಸಮನ್ವಯವನ್ನು ಪ್ರಾರಂಭಿಸುವ ಉದ್ದೇಶ ಇದೆ. ಎಂಫಸಿಸ್ ನಮ್ಮ ಈ ಪ್ರಯತ್ನಕ್ಕೆ ಬೆಂಬಲ ನೀಡಿದೆ. ಎಐ ಲ್ಯಾಬ್, ಸ್ಕಿಲ್ ಲ್ಯಾಬ್ ಹಾಗೂ ಹ್ಯಾಂಡ್ಸ್‌ಆನ್ ತರಬೇತಿಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್‌ನ ಫಲಕವನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅನಾವರಣಗೊಳಿಸಿದರು.
ಸ್ಪಾರ್ಕಲ್ ಇನ್ನೋವೇಶನ್ ಇಕೋಸಿಸ್ಟಮ್ ಮತ್ತು ಕಮ್ಯುನಿಕೇಷನ್ಸ್‌ನ ಹಿರಿಯ ಉಪಾಧ್ಯಕ್ಷೆ ದೀಪಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಉಪಾಧ್ಯಕ್ಷ ಚೇತನ್ ದೀಕ್ಷಿತ್, ವಿಧಾನ ಪರಿಷತ್ ಸದಸ್ಯ ಎಚ್.ಪಿ. ಸುಧಾಮ ದಾಸ್, ಯುನೈಟೆಡ್ ವೇ ಮುಂಬೈನ ಅಧ್ಯಕ್ಷ ರಮಣ್ ಮಾಧುಕ್ ಹಾಗೂ ಎಂಆರ್‌ಪಿಎಲ್‌ನ ನಿವೃತ್ತ ಗ್ರೂಪ್ ಜನರಲ್ ಹೆಡ್ ಕೃಷ್ಣ ಹೆಗ್ಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಾಹಿತ್ಯ ಪ್ರಾರ್ಥಿಸಿದರು. ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಿಇಒ ಜಾನ್ಸನ್ ಟೆಲ್ಲಿಸ್ ಸ್ವಾಗತಿಸಿದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೊನಿಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
---------------
ಕೌಶಲ್ಯಾಭಿವೃದ್ಧಿ, ನವೀನತೆ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ಶಿಕ್ಷಣ ಸಂಸ್ಥೆಗಳೇ ರಾಜ್ಯದ ಭವಿಷ್ಯ ರೂಪಿಸುತ್ತಿವೆ. ರಾಜ್ದ ಮೂಲೆ ಮೂಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣಕ್ಕಾಗಿ ಬೆಂಗಳೂರಿನ ಕೆಲವೇ ಕಾಲೇಜುಗಳಿಗೆ ಒಲವು ತೋರುತ್ತಿದ್ದಾರೆ. ಆದರೆ ಮಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲೂ ಗುಣಮಟ್ಟದ ಶಿಕ್ಷಣ ಮತ್ತು ಅತ್ಯುತ್ತಮ ಸೌಲಭ್ಯಗಳು ಲಭ್ಯವಿರುವುದನ್ನು ಅರಿಯಬೇಕು.
-ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net