ಅಭಿವೃದ್ಧಿಯಲ್ಲಿ ಕಪಿಲತೀರ್ಥ ಜಲಪಾತಕ್ಕೆ ಹಿನ್ನಡೆ - ಕ.ಕ. ಭಾಗದ ಏಕೈಕ ಫಾಲ್ಸ್

Kapilathirtha Falls Hanumasagara
ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಕಪಿಲತೀರ್ಥ ಜಲಪಾತ ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವುದು. (ಸಂಗ್ರಹ ಚಿತ್ರ)
Published on

ಹನುಮಸಾಗರ: ಸಮೀಪದ ಕಬ್ಬರಗಿ ಗ್ರಾಮದ ಕಪಿಲತೀರ್ಥ ಜಲಪಾತ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಅರಣ್ಯ ಪ್ರದೇಶದಲ್ಲಿರುವ ಉತ್ತರ ಕರ್ನಾಟಕದ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದಾದ ಕಲ್ಯಾಣ ಕರ್ನಾಟಕ ಭಾಗದ ಏಕೈಕ ಜಲಪಾತ ಪ್ರಚಾರದ ಕೊರತೆಯಿಂದ ಹಿನ್ನೆಡೆ ಅನುಭವಿಸುವಂತಾಗಿದೆ.

ಮಳೆಗಾಲದಲ್ಲಿ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲುವುದಿಲ್ಲ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಪ್ರವಾಸೋದ್ಯಮ ಬೆಳವಣಿಗೆಗೆ ಯೋಜನೆಗಳನ್ನು ರೂಪಿಸುವ ಅನಿವಾರ್ಯತೆ ಇದೆ.

ಜಲಪಾತದಲ್ಲಿ ಸುಮಾರು 25 ಅಡಿ ಎತ್ತರದಿಂದ ರಮಣೀಯವಾಗಿ ನೀರು ಭೂಮಿಗೆ ಅಪ್ಪಳಿಸುತ್ತದೆ. ಆ ನೀರಿಗೆ ಮಹಿಳೆಯರು, ಮಕ್ಕಳು ಸೇರಿ ಎಲ್ಲರೂ ಮೈಯೊಡ್ಡಿ ಸ್ನಾನ ಮಾಡಿ ದಣಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಮೇಲಿಂದ ನೀರು ಬೀಳುವ ಕೆಳಗೆ ಬೃಹತ್ತಾಕಾರದ ಬಂಡೆಯಿದ್ದು, ಬಂಡೆಗೆ ಸಿಡಿದ ನೀರು ಪಕ್ಕದಲ್ಲಿ ನಿಂತವರಿಗೆ ಮುತ್ತಿನಂತೆ ಸಿಡಿಯುವ ದೃಶ್ಯ ನೋಡಿದ ಎಲ್ಲರನ್ನೂ ಆಕರ್ಷಿಸುತ್ತದೆ.

ಈ ಭಾಗದಲ್ಲಿ ಉತ್ತಮ ಮಳೆಯಾದರೆ, ಈ ಜಲಪಾತದಲ್ಲಿ ನೀರು ಭೋರ್ಗರೆದು ಬೀಳಲು ಪ್ರಾರಂಭವಾಗಿ ಜನರು ತಂಡೋಪ ತಂಡವಾಗಿ, ಕುಟುಂಬ ಸಮೇತವಾಗಿ ಬರುತ್ತಾರೆ. ಆದರೆ, ಇಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯದ ಸಮಸ್ಯೆ ಕಾಡುತ್ತಿದೆ. ಜಲಪಾತಕ್ಕೆ ಇತ್ತೀಚೆಗೆ ಸಿಸಿ ರಸ್ತೆ ವ್ಯವಸ್ಥೆ ಮಾಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.

ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಮಾಯ

ದೂರದ ಊರಿಂದ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯ, ಊಟ ಮತ್ತು ಉಪಹಾರಕ್ಕಾಗಿ ಯಾವುದೇ ಹೋಟೆಲ್‌ಗಳಿಲ್ಲ. ಶೌಚಗೃಹ ವ್ಯವಸ್ಥೆ ಇಲ್ಲ. ಊಟದ ಕೊಠಡಿಗಳಿಲ್ಲ. ಇದರಿಂದಾಗಿ ಜನರು ಜಲಪಾತದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಅಡುಗೆ ತಯಾರಿಸಿ ಊಟು ಮಾಡುತ್ತಿದ್ದಾರೆ.

ಅಲ್ಲಿಯೇ ಪ್ಲೇಟ್, ಪ್ಲಾಸ್ಟಿಕ್‌ಗಳನ್ನು ಬಿಟ್ಟು ಹೋಗುತ್ತಿದ್ದು, ಸ್ವಚ್ಛತೆ ಎಂಬುದು ಮಾಯವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಡುಗೆ ತಯಾರಿಸಲು, ಕುಳಿತು ಊಟ ಮಾಡಲು ಒಂದು ವಿಶಾಲವಾದ ಕೊಠಡಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಮೂಲ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಜನರ ಒತ್ತಾಸೆ.

ಅನುದಾನದ ಕೊರತೆಯಿಂದ ಸದ್ಯ ಕಪಿಲತೀರ್ಥ ಜಲಪಾತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಪ್ರವಾಸಿ ತಾಣ ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆಯ ಸೌಲಭ್ಯಗಳನ್ನು ಬಳಕೆ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಬೇಕಾಗಿದೆ.| ಚೈತ್ರಾ ಮೆಣಸಿನಕಾಯಿ, ಉಪವಲಯ ಅರಣ್ಯ ಅಧಿಕಾರಿ, ಕುಷ್ಟಗಿ ಕಪಿಲತೀರ್ಥ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ಇದರಿಂದಾಗಿ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಜಲಪಾತದ ಜನಪ್ರಿಯತೆ ಕಡಿಮೆಯಾಗಿದೆ. ಕೂಡಲೇ ಪ್ರವಾಸಿತಾಣದ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳಲಿ.| ಸುರೇಶ ಕೆ. ಹೊಸಮನಿ, ಕಬ್ಬರಗಿ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net