ಅಭಿವೃದ್ಧಿ ನಿಗಮ ಹಲವು, ಸಿಬ್ಬಂದಿ ಕೆಲವರು

Vidhana Soudha vvani
Published on

ಬೆಂಗಳೂರು: ಹಿಂದುಳಿದ ಸಮುದಾಯಗಳಿಗೆಂದು ಹಲವು ಅಭಿವೃದ್ಧಿ ನಿಗಮಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ, ರಚಿತ ಹೊಸ ನಿಗಮಗಳ ಆಡಳಿತಾತ್ಮಕ ಕೆಲಸಗಳೆಲ್ಲ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹೆಗಲೇರಿದ್ದು, ಯಾವೊಂದು ನಿಗಮದ ಕೆಲಸವೂ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎನ್ನುವುದರತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಗಮನ ಸೆಳೆಯಲಾಗಿದೆ.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ 2020-21ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಈ ವಿಷಯ ಪ್ರಸ್ತಾಪಿಸಿ, ಹೊಸ ನಿಗಮಗಳಿಗೆ ಅಗತ್ಯ ಆಡಳಿತಾತ್ಮಕ ಅಧಿಕಾರಿ, ಸಿಬ್ಬಂದಿ ನೇಮಿಸಲು ಸಿಎಂಗೆ ಮೊರೆಯಿಟ್ಟಿತು ಎಂದು ಉನ್ನತ ಮೂಲಗಳು ತಿಳಿಸಿವೆ. ಅಂಬಿಗರ ಚೌಡಯ್ಯ, ವಿಶ್ವಕರ್ಮ, ಬ್ರಾಹ್ಮಣ, ಆರ್ಯವೈಶ್ಯ ಸೇರಿ ಹತ್ತಕ್ಕೂ ಹೆಚ್ಚು ಅಭಿವೃದ್ಧಿ ನಿಗಮಗಳು ಇತ್ತೀಚಿನ ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದಿವೆ. ಈ ನಿಗಮಗಳ ಎಲ್ಲ ಕೆಲಸಗಳನ್ನು ಏಕೈಕ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಸಿಬ್ಬಂದಿಯೇ ನಿರ್ವಹಿಸುತ್ತಿದ್ದು, ಕೆಲಸದ ಹೊರೆ ಹೆಚ್ಚಿ ಅಡ್ಡ ಪರಿಣಾಮಬೀರಿದೆ ಎಂದು ಮನವರಿಕೆ ಮಾಡಿಕೊಟ್ಟಿದೆ. ಬಾಡಿಗೆ ಕಟ್ಟಡದಲ್ಲಿರುವ ಎಲ್ಲ ಹಾಸ್ಟೆಲ್​ಗಳಿಗೆ ತ್ವರಿತವಾಗಿ ಜಾಗ ಗುರುತಿಸಿ ಸ್ವಂತ ಕಟ್ಟಡ ನಿರ್ವಿುಸಿದರೆ ಸಾರ್ವಜನಿಕ ಆಸ್ತಿ ಸೃಜನೆಯಾಗುತ್ತದೆ. ಜತೆಗೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಬಾಡಿಗೆ ಹೊರೆ ತಗ್ಗುತ್ತದೆ. ವಿದ್ಯಾಸಿರಿ ಯೋಜನೆ ಮುಂದುವರಿಕೆ, ವಿದೇಶದಲ್ಲಿ ಅಭ್ಯಾಸ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಸಮುದಾಯ ಭವನಗಳ ನಿರ್ಮಾಣ ಮುಂತಾದ ಬೇಡಿಕೆಗಳನ್ನು ಸಿಎಂ ಬಿಎಸ್​ವೈ ಮುಂದಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂಕದ ಮಿತಿ ಸಡಿಲಿಸಿ

ರಾಜ್ಯದ ಕೆಲವು ಸ್ವಾಯತ್ತ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಶೇ.55-60 ಗರಿಷ್ಠ ಅಂಕಗಳ ಮಿತಿ ವಿಧಿಸುತ್ತಿವೆ. ಹೀಗಾಗಿ ಹಿಂದುಳಿದ ವರ್ಗಗಳು ಮಾತ್ರವಲ್ಲ ಗ್ರಾಮೀಣ ಪ್ರದೇಶದ ಎಲ್ಲ ಜಾತಿ, ವರ್ಗಗಳಿಗೂ ಸಮಸ್ಯೆಯಾಗಿದೆ. ಯುಪಿಎಸ್ಸಿ, ಕೆಪಿಎಸ್ಸಿ ಮಾದರಿಯಲ್ಲಿ ಅರ್ಜಿ ಹಾಕುವುದಕ್ಕೆ ಅಂಕದ ಮಿತಿಯನ್ನು ಶೇ.35ಕ್ಕೆ ಇಳಿಸಿ ಪ್ರವೇಶ ಪರೀಕ್ಷೆ ನಡೆಸುವುದು ಸೂಕ್ತ. ಇದರಲ್ಲಿ ತೇರ್ಗಡೆಯಾದವರು ಮುಂದಿನ ಹಂತದ ಪರೀಕ್ಷೆಗೆ ಅರ್ಹರಾಗಲಿದ್ದು, ಉದ್ಯೋಗಾಕಾಂಕ್ಷಿಗಳ ಸಮಸ್ಯೆ ಬಗೆಹರಿಯುತ್ತದೆ ಎಂದು ಒಕ್ಕೂಟ ಮನವಿ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net