

ರಾಮನಗರ : ಆಯಾ ಜಿಲ್ಲೆಗಳಲ್ಲಿ ಬೆಳೆಯುವ ಪ್ರಮುಖ ಬೆಳೆಗಳಿಗೆ ಉತ್ತೇಜನ ನೀಡಿ ರೈತರನ್ನು ಆರ್ಥಿಕವಾಗಿ ಸದೃಢ ಮಾಡುವ ಸಲುವಾಗಿ ಜಾರಿಗೆ ತಂದಿರುವ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಗೆ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಎರಡು ವರ್ಷಗಳ ಹಿಂದೆ ಜಾರಿಗೆ ಬಂದ ಈ ಯೋಜನೆಯಲ್ಲಿ ಜಿಲ್ಲೆಯನ್ನು ತೆಂಗು ಬೆಳೆಯಡಿ ಆಯ್ಕೆ ಮಾಡಲಾಗಿದೆ. ಆದರೆ ಈವರೆಗೂ ಯೋಜನೆಯಲ್ಲಿ ಕೇವಲ ಒಬ್ಬರಿಗಷ್ಟೇ ಸಾಲ ಸೌಲಭ್ಯ ದೊರೆತಿದ್ದು, ಉಳಿದಂತೆ 2 ವರ್ಷದಲ್ಲಿ ಕೇವಲ 42 ಅರ್ಜಿಗಳಷ್ಟೇ ಇಲಾಖೆ ಕೈ ಸೇರಿದ್ದು, ತೆಂಗು ಬೆಳೆಗಾರರು ಯೋಜನೆಯ ಲಾಭ ಪಡೆಯಲು ಮುಂದೆ ಬರದೇ ಇರುವುದೇ ಕಾರಣವಾಗಿದೆ.
2020-21ನೇ ಸಾಲಿನಲ್ಲಿ 16 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಒಂದು ಅರ್ಜಿಯನ್ನು ಇಲಾಖೆ ತಿರಸ್ಕೃತಗೊಳಿಸಿತ್ತು. ಸಾಲ ಸೌಲಭ್ಯಕ್ಕಾಗಿ 15 ಅರ್ಜಿಗಳನ್ನು ಕೃಷಿ ಇಲಾಖೆ ಬ್ಯಾಂಕಿಗೆ ಸಲ್ಲಿಸಿದೆ. ಇದರಲ್ಲಿ ಒಂದು ಅರ್ಜಿಗೆ ಮಾತ್ರವೇ ಸಾಲಸೌಲಭ್ಯ ದೊರಕಿದೆ. 2021-22ನೇ ಸಾಲಿಗೆ 160 ಅರ್ಜಿಗಳ ಗುರಿ ಇದ್ದರೆ, ಕೇವಲ 26 ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲಾಮಟ್ಟದಲ್ಲಿ ಇಷ್ಟು ಅರ್ಜಿಗಳು ಆಯ್ಕೆಯಾಗಿದ್ದರೂ, ಎಷ್ಟು ಮಂದಿಗೆ ಸಾಲ ದೊರೆಯಲಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
10 ಲಕ್ಷ ರೂ.ವರೆಗೂ ಸಾಲ: ಯೋಜನೆಯಡಿ ಆಯ್ಕೆಯಾಗಿರುವ ತೆಂಗು ಬೆಳೆ ಮೂಲಕ ಚಾಕೊಲೇಟ್, ಐಸ್ ಕ್ರೀಂ, ಬಿಸ್ಕೆಟ್, ನೀರಾ, ಕೊಬ್ಬರಿ ಎಣ್ಣೆ, ಕೊಬ್ಬರಿ ಪೌಡರ್.. ಹೀಗೆ ಸುಮಾರು 30 ಬಗೆಯ ತೆಂಗು ಉತ್ಪನ್ನಗಳ ತಯಾರಿಸಿ ಮತ್ತು ಸಂಸ್ಕರಣಾ ಘಟಕ ತೆರೆಯಬಹುದು. ಇದಕ್ಕಾಗಿ ಶೇ.35 ಸಬ್ಸಿಡಿ ದರದಲ್ಲಿ ಗರಿಷ್ಠ 10 ಲಕ್ಷ ರೂ.ವರೆಗೂ ಸಾಲ ದೊರೆಯಲಿದೆ. ಆದರೆ, ಇದಕ್ಕಾಗಿ ಅರ್ಜಿ ಸಲ್ಲಿಸಬೇಕಿದ್ದ ತೆಂಗು ಬೆಳೆಗಾರರೇ ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, 10 ಸಾವಿರಕ್ಕೂ ಹೆಚ್ಚು ರೈತರು ತೆಂಗು ಉತ್ಪಾದನೆಯಲ್ಲಿ ತೊಡಗಿದ್ದಾರೆ.
ಇವರು ಆನ್‌ಲೈನ್‌ನಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಮೂಲಕ ಅರ್ಜಿ ಸಲ್ಲಿಸಬಹುದು, ಇಲ್ಲವೆ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಜಿಲ್ಲಾ ಸಮಿತಿ ಮೂಲಕ ಬ್ಯಾಂಕ್‌ಗಳಿಗೆ ಸಾಲ ಶಿಾರಸು ತಲುಪಲಿದೆ. ಆದರೆ, ಕೃಷಿ ಇಲಾಖೆ ಕೇವಲ ಬ್ಯಾಂಕ್‌ಗಳಿಗೆ ಶಿಾರಸು ಮಾಡುವ ಅಧಿಕಾರವನ್ನಷ್ಟೇ ಹೊಂದಿದೆ. ಇದರಲ್ಲಿ ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸಲೂಬಹುದು. ಹೀಗಾಗಿ, ಬೆಳೆಗಾರರು ಅರ್ಜಿ ಸಲ್ಲಿಕೆಗೆ ಹಿಂದೇಟು ಹಾಕುತ್ತಿದ್ದಾರೆ.
ಈ ಯೋಜನೆಯಡಿ ಗರಿಷ್ಠ 10 ಲಕ್ಷ ರೂ. ಅನುದಾನ ಲಭ್ಯವಿದ್ದು, ಒಬ್ಬ ಲಾನುಭವಿಗೆ ಶೇ.35 ಸಬ್ಸಿಡಿ ನೀಡಲಾಗುತ್ತಿದೆ. 10 ಲಕ್ಷ ರೂ.ಗೆ 3.5 ಲಕ್ಷ ರೂ. ಸಹಾಯಧನ ಸಿಗಲಿದೆ. ಹಾಗಾದರೆ, ರೈತರು 6.5 ಲಕ್ಷ ರೂ. ಬಂಡವಾಳ ಹೂಡಬೇಕು. ಬ್ಯಾಂಕ್‌ನಿಂದ ಸಾಲ ಸಿಗುತ್ತಿದೆಯಾದರೂ ಅದಕ್ಕೆ ರೈತನೇ ಹೊಣೆಗಾರನಾಗಬೇಕಾಗುತ್ತದೆ. ಸಂಸ್ಕರಣ ಘಟಕದಿಂದ ಬಂದ ಉತ್ಪನ್ನವನ್ನು ಮಾರಾಟ ಮಾಡುವುದು ಹೇಗೆ? ಪ್ರತಿಷ್ಠಿತ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಬೇಕು. ಆದರೆ, ಆ ಕಂಪನಿಗಳ ಜತೆ ಒಪ್ಪಂದ ಮಾಡಿಸುವವರು ಯಾರು ಎನ್ನುವುದೂ ರೈತರ ಚಿಂತೆಯಾಗಿದೆ.
ಯೋಜನೆ ಜಾರಿ ಸಂಬಂಧ ಸಾಕಷ್ಟು ಪ್ರಚಾರ ಮಾಡಿದ ಹೊರತಾಗಿಯೂ ರೈತರು ಸೌಲಭ್ಯ ಪಡೆಯಲು ಮುಂದೆ ಬರುತ್ತಿಲ್ಲ. ಈವರೆಗೆ ಒಬ್ಬರಿಗೆ ಸಾಲ ಮಂಜೂರಾಗಿದೆ. ಕಳೆದ ವರ್ಷ 15 ಅರ್ಜಿಗಳನ್ನು ಆಯ್ಕೆ ಮಾಡಲಾಗಿದ್ದು, ಒಂದು ಅರ್ಜಿ ತಿರಸ್ಕೃತಗೊಂಡಿದೆ. ಈ ಬಾರಿ ಕೇವಲ 26 ಅರ್ಜಿಗಳು ಸಲ್ಲಿಕೆಯಾಗಿವೆ. ಸೋಮ್‌ಸುಂದರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ, ರಾಮನಗರ