

ಸುಂಟಿಕೊಪ್ಪ : ಜೀವನವನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಂಡಾಗ ಈ ಜೀವನದ ಗೆಲುವು ಮತ್ತು ಸಾಧನೆ ನಮ್ಮದಾಗುತ್ತದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸಂತ ಅಂತೋಣಿಯವರ ದೇವಾಲಯ ಇವರ ಸಂಯುಕ್ತಾಶ್ರಯದಲ್ಲಿ 14ನೇ ವರ್ಷದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳಿಗೆ ಮತ್ತು ಯುವಜನತೆಗೆ ಸೋಲನ್ನು ಕಲಿಸಬೇಕು, ಗೆಲುವು ಸದಾಸಿಗುವ ವಸ್ತುವಲ್ಲ ಎಂಬ ನಿಲುವನ್ನು ಕಲಿಸಿಕೊಡಬೇಕು. ಸೋತು ಗೆಲ್ಲುವ ಕ್ರೀಡಾ ಮನೋಬಾವವನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಪ್ರಸ್ತುತ ದಿನಗಳಲ್ಲಿ ಕ್ರೀಡಾಮನೋಭಾವದಿಂದ ಜೀವನವನ್ನು ಎದುರಿಸಿ ಗೆಲುವುದನ್ನು ಕಲಿಯಿರಿ ಎಂದು ಹೇಳೀದರು.
14 ವರ್ಷಗಳಿಂದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ವಿಚಾರ. ಗ್ರಾಮೀಣ ಭಾಗದಲ್ಲಿ ಅಥವಾ ನಗರ ಪ್ರದೇಶದಲ್ಲಿ ಕ್ರೀಡಾಕೂಟದ ಮೂಲಕ ಸಂಘಟಿತರಾಗಿ ಒಬ್ಬರಿಗೊಬ್ಬರು ಸಹಕರಿಸಿಕೊಳ್ಳುತ್ತಿರುವುದು ಒಳ್ಳೆಯ ಸಂಸ್ಕೃತಿ. ಈ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರೊಂದಿಗೆ ಸೇರಿ ನಿಮ್ಮ ಬೇಡಿಕೆಗಳ ಈಡೇರಿಕೆಯ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ.ಫಾ.ವಿಜಯಕುಮಾರ್ ಮಾತನಾಡಿದರು. ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪಡೆದ ಡಾ.ನಿಲನ ಜೇಮ್ಸ್, ಎಂಬಿಬಿಎಸ್‌ನಲ್ಲಿ ಉನ್ನತ ಅಂಕ ಪಡೆದ ಡಾ.ಅನ್‌ಲಿಷಾ, ನಾಟಿ ವೈದ್ಯ ಜಾನ್ ಲೋಬೊ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿರಾಜಪೇಟೆ ವಲಯದ ಗುರು ಸಂತ ಅನ್ನಮ್ಮ ದೇವಾಲಯದ ರೇ.ಪಾ. ಜೇಮ್ಸ್ ಡೊಮಿನಿಕ್, ಆಮ್ಮತ್ತಿ ದೇವಾಲಯದ ಧರ್ಮಗುರು ಮದಲೈಮುತ್ತು, ಚೆಟ್ಟಳ್ಳಿ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ರೇ.ಪಾ.ಜೆರಾಲ್ಡ್ ಸೀಕ್ವಾರ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೋವಿಟಾ ವಾಝ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್, ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳ ರಾಜ್ಯ ಉಪಾಧ್ಯಕ್ಷ ಟಿ.ಕೆ.ಸಾಯಿಕುಮಾರ್, ಸಂತ ಅಂತೋಣಿ ದೇವಾಲಯದ ಕ್ರೀಡಾ ಆರ್ಥಿಕ ಸಮಿತಿ ಅಧ್ಯಕ್ಷ ಪಿ.ಎಂ. ಬಿಜು, ಸುಂಟಿಕೊಪ್ಪ ಸ.ಮಾ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಯು ರಫೀಕ್‌ಖಾನ್, ಮಹಿಳಾ ಘಟಕಗಳ ಸದಸ್ಯರಾದ ರೋಸ್‌ಮೇರಿ ರಾಡ್ರಿಗಸ್, ಗ್ರೇಸಿ ಡೇವಿಡ್, ಪಿ.ಎಫ್.ಸೆಬಾಸ್ಟೀನ್ ಆಡಳಿತ ಮಂಡಳಿ ಸದಸ್ಯರು ಇದ್ದರು.
ಕ್ರಿಕೆಟ್ ಪಂದ್ಯಾವಳಿ ಫಲಿತಾಂಶ : ಕ್ರೀಡಾಕೂಟದಲ್ಲಿ ಜಿಲ್ಲೆಯಾದ್ಯಂತ 22 ತಂಡಗಳು ಪಾಲ್ಗೊಂಡಿದ್ದು ಫೈನಲ್ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ತಂಡವು ಸೋಮವಾರಪೇಟೆ ಗೋಪಾಲಪುರ ತಂಡವನ್ನು ಸೋಲಿಸುವ ಮೂಲಕ ರೋಮನ್ ಕ್ಯಾಥೋಲಿಕ್ ಕಪ್ ಅನ್ನು ಮುಡಿಗೇರಿಸಿಕೊಂಡಿತು. ತೃತೀಯ ಸ್ಥಾನವನ್ನು ಸಿದ್ಧಾಪುರ ಸೈಂಟ್ ಪೊರೆನ್ಸ್ ದೇವಾಲಯ ತಂಡ ಪಡೆದರೆ, ಆಮ್ಮತ್ತಿ ಸಂತ ಅಂತೋಣಿ ದೇವಾಲಯದ ಎ. ತಂಡ ನಾಲ್ಕನೇ ಪಡೆದುಕೊಂಡಿತು. ಮಹಿಳೆಯರಿಗಾಗಿ ಏರ್ಪಡಿಸಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 10 ತಂಡಗಳು ಪಾಲ್ಗೊಂಡಿದ್ದು, ಅಬ್ಬೂರುಕಟ್ಟೆಯ ಸೈಂಟ್ ಲಾರೆನ್ಸ್ ತಂಡ ಮಡಿಕೇರಿ ಸಂತ ಮೈಕಲರ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಪುರುಷರ ಹಗ್ಗಜಗ್ಗಾಟದಲ್ಲಿ ಅಬ್ಬೂಕಟ್ಟೆ ತಂಡ ಪೊನ್ನಂಪೇಟೆ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಹೆಗ್ಗಳ ಸೆಂಟ್ ಝಾನ್ ತಂಡವು (ಪ್ರ), ಮಡಿಕೇರಿಯ ಸಂತ ಮೈಕಲರ ತಂಡವು (ದ್ವಿ) ಸ್ಥಾನವನ್ನು ಪಡೆದುಕೊಂಡಿತು.