

ನಂಜನಗೂಡು: ವಿಜ್ಞಾನದ ಅವಿಷ್ಕಾರಗಳು ಅವಿಷ್ಕಾರಗಳಾಗಿ ಉಳಿಯದೇ ನಿತ್ಯ ಜೀವನದಲ್ಲಿ ಪ್ರಾಯೋಗಿಕವಾಗಿ ಬಳಕೆಯಾದಾಗ ಮಾತ್ರ ಸಂಶೋಧನೆ ಸಾರ್ಥಕತೆಯಾಗುತ್ತದೆ ಎಂದು ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಸ್.ಹರ್ಷ ಹೇಳಿದರು.
ತಾಲೂಕಿನ ಸುತ್ತೂರಿನ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸತ್ಯ ಶೋಧನೆಯೇ ವಿಜ್ಞಾನದ ಗುರಿಯಾಗಿರುವುದರಿಂದ ಅನೇಕ ಸತ್ಯ ಸಂಗತಿಗಳು ಬೆಳಕಿಗೆ ಬರಲು ಸಾಧ್ಯವಾಗಿದೆ. ಸಂಶೋಧನೆಗಳು ಹಾಗೂ ಆವಿಷ್ಕಾರಗಳು ನಮ್ಮ ಬದುಕಿನಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗಬೇಕು. ವಿದ್ಯಾರ್ಥಿಗಳಿಗೆ ಸರಳ ನಿದರ್ಶನಗಳ ಮೂಲಕ ವಿಜ್ಞಾನವನ್ನು ಅರ್ಥ ಮಾಡಿಸಬೇಕು.ವಿಷಯದ ಕ್ಲಿಷ್ಟತೆ ಮತ್ತು ಸರಳತೆ ಬೋಧಿಸುವವರ ಮೇಲೆ ನಿರ್ಧಾರವಾಗುತ್ತದೆ. ಆದ್ದರಿಂದ ಶಿಕ್ಷಕರು ಸದಾ ಸಂಶೋಧಕನಾಗಿ ಹೊಸ ಬೋಧನಾ ವಿಧಾನಗಳನ್ನು ಕಂಡುಕೊಂಡು ಬೋಧಿಸಿದಾಗ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ಇತ್ತೀಚಿಗೆ ವಿಜ್ಞಾನದ ಸಂಶೋಧನೆಯ ಪ್ರಗತಿ ಕುಂಠಿತವಾಗಿದ್ದು, ಸರ್ ಸಿ.ವಿ. ರಾಮನ್ ಅವರು ನೋಬೆಲ್ ಪುರಸ್ಕೃತರಾದ ನಂತರ ಇದುವರೆಗೂ ವಿಜ್ಞಾನ ಕ್ಷೇತ್ರದಲ್ಲಿ ಯಾವುದೇ ಭಾರತೀಯರು ಈ ಪುರಸ್ಕಾರಕ್ಕೆ ಭಾಜನರಾಗಿಲ್ಲ, ಹಾಗಾಗಿ ಶಿಕ್ಷಕರಾಗಲು ಸಿದ್ಧರಾಗಿರುವ ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮನೋಭಾವವನ್ನು ಬೆಳೆಸಿ, ದೇಶದ ಪ್ರಗತಿಗೆ ಪೂರಕವಾಗುವಂತೆ ವಿಜ್ಞಾನವನ್ನು ಬಳಸಿಕೊಳ್ಳಲು ಜಾಗೃತರಾಗುವಂತೆ ಮಾಡಬೇಕು ಎಂದು ತಿಳಿಸಿದರು.
ಸುತ್ತೂರಿನ ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ ಮಾತನಾಡಿ, ವಿಜ್ಞಾನದಿಂದ ವಿಕಾಸ, ವಿಜ್ಞಾನದಿಂದಲೇ ವಿನಾಶ ಎಂಬ ಮಾತಿದೆ. ಹಾಗಾಗಿ ವಿಜ್ಞಾನದ ಅವಿಷ್ಕಾರಗಳನ್ನು ಅಭಿವೃದ್ಧಿಗೆ ಬಳಸಿಕೊಂಡು ಪ್ರಕೃತಿ ನಿಯಮಗಳಿಗೆ ಬದ್ಧರಾಗಿ ಬದುಕುವ ಕಲೆಯನ್ನು ರೂಢಿಸಿಕೊಂಡು ಜ್ಞಾನ ಸಂಪಾದನೆ ಯೊಂದಿಗೆ ಮಾದರಿ ಶಿಕ್ಷಕರಾಗಬೇಕು ಎಂದು ಹೇಳಿದರು.
ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶೋಧನಾತ್ಮಕ ಮನೋಭಾವವಿರಬೇಕು. ನಮ್ಮ ದಿನನಿತ್ಯದ ಬದುಕಿನಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕೌತುಕವನ್ನು ಅರಿಯುವ ಕುತೂಹಲವನ್ನು ಬೆಳೆಸಬೇಕು. ಸರಿಯಾದ ಉದ್ದೇಶದೊಂದಿಗೆ ವಿಜ್ಞಾನದ ಕಲಿಕೆಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ತಿಳಿಸಿದರು.
ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ ಸಂಯೋಜನಾಧಿಕಾರಿ ಜಿ.ಎಲ್. ತ್ರಿಪುರಾಂತಕ, ಪ್ರಾಂಶುಪಾಲ ಡಾ.ಎಚ್.ಎಂ.ಮಹೇಶ್ಸೇರಿ ಹಾಗೂ ಸಹಾಯಕ ಪ್ರಾಧ್ಯಾಪಕರು ಉಪಸ್ಥಿತರಿದ್ದರು.