

ಕೋಲಾರ: ಮಾಲೂರು ಪಟ್ಟಣದಲ್ಲಿ ಹೂಡಿ ವಿಜಯ್ ಕುಮಾರ್ ಅವರ ಮನೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ಭೇಟಿ ಮಾಡಿ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕೋರಿದರು.
ದೇಶಾದ್ಯಂತ ಮೋದಿ ಹವಾ ಜೋರಾಗಿದೆ. ರಾಜ್ಯದಲ್ಲಿಯೂ ಸಹ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಪೂರಕವಾದ ವಾತಾವರಣವಿದೆ. ಕಳೆದ ಚುನಾವಣೆಯಲ್ಲಿ ಆಗಿರುವ ನೋವು ಮರೆತು ಬೆಂಬಲ ನೀಡಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಚುನಾವಣೆ ನಡೆಯುತ್ತಿದೆ. ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಹೊಂದಾಣಿಕೆಯಿAದ ಕೆಲಸ ಮಾಡುತ್ತಿದ್ದಾರೆ. ಮಾಲೂರಿನಲ್ಲಿ ನಡೆದ ಪ್ರಚಾರ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ನಿಮಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿದಿದೆ, ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡಲಾಗುತ್ತದೆ, ಸ್ವತಂತ್ರ್ಯ ಅಭ್ಯರ್ಥಿಯಾಗಿ ಹೆಚ್ಚು ಮತ ಪಡೆದುಕೊಂಡಿರುವುದು ನಿಮ್ಮ ನಾಯಕತ್ವ ತೋರಿಸುತ್ತದೆ. ನಿಮ್ಮ ಬೆಂಬಲವು ಅಗತ್ಯವಿದೆ ಎಂದರು.
ಮುಖಂಡ ಹೂಡಿ ವಿಜಯ್‌ಕುಮಾರ್ ಮಾತನಾಡಿ, ಖಂಡಿತವಾಗಿಯು ಚುನಾವಣೆಯಲ್ಲಿ ಶಕ್ತಿ ಮೀರಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದಾಗಿ ಭರವಸೆ ನೀಡಿದರು. ಆನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿಜಿ ಕುಮಾರ್, ಲೋಕಸಭೆ ಚುನಾವಣೆಯು ಜೆಡಿಎಸ್-ಬಿಜೆಪಿ ಮೈತಿಯೊಂದಿಗೆ ನಡೆಯುತ್ತಿದೆ, ಎನ್‌ಡಿಎ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಅವರನ್ನು ಕಣಕ್ಕೆ ಇಳಿಸಲಾಗಿದ್ದು, ತೆನೆ ಹೊತ್ತ ಮಹಿಳೆ ಚಿಹ್ನೆಗೆ ಮತ ಚಲಾಯಿಸಬೇಕು, ಈ ಬಗ್ಗೆ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಕರ ಪತ್ರ ಹಂಚಿಕೆ ಮಾಡಿ ಮತದಾರರಿಗೆ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಮುಖಂಡ ಜಿ.ಇ.ರಾಮೇಗೌಡ, ಸ್ವಾಭಿಮಾನಿ ಜನತಾ ಪಕ್ಷದ ಪದಾಧಿಕಾರಿಗಳಾದ ಎಂ.ಎಲ್.ರವಿ, ವಿ.ಹನಮಪ್ಪ, ದೇವರಾಜ್ ರೆಡ್ಡಿ, ಬಿ.ಎನ್.ರಾಜಾರಾಮ್, ಬಿ.ಆರ್.ವೆಂಕಟೇಶ್, ಸಿ.ಪಿ.ನಾಗರಾಜ್, ವೆಂಕಟೇಶ್ ಗೌಡ, ರಾಮಮೂರ್ತಿ, ಬಾನು ತೇಜ, ಕೂರಿ ಮಂಜು, ಅಂಬರೀಶ್ ರೆಡ್ಡಿ, ಮಿಂಡಹಳ್ಳಿ ಮುನಿರಾಜು, ಶ್ರೀವಳ್ಳಿ, ಅಮರಾವತಿ, ವಿನುತಾ ಹಾಜರಿದ್ದರು.