ದೇವೇಗೌಡರ ಜೀವನ ಯುವ ಪೀಳಿಗೆಗೆ ಮಾದರಿ

DEVEGOUDA
Published on

ಬೆಂಗಳೂರು: ಮಣ್ಣಿನಮಗನಾಗಿ ಮಾಜಿ ಪ್ರಧಾನಿ ದೇವೇಗೌಡರು ಗ್ರಾಮೀಣ ಜನರ ಉದ್ಧಾರಕ್ಕೆ ಪಣತೊಟ್ಟವರು. ಅವರ ಜೀವನ ಯುವ ಪೀಳಿಗೆಗೆ ಮಾದರಿ ಎಂದು ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಾಲಾನಂದ ನಾಥ ಸ್ವಾಮೀಜಿ ಹೇಳಿದರು.

ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ.ಅಂಬರೀಶ್ ಸಭಾಂಗಣದಲ್ಲಿ ಕನ್ನಡಿಗರ ಕನ್ನಡ ಕೂಟ ದುಬೈ ಅವರಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಚನ್ನಮ್ಮ ದೇವೇಗೌಡ ದಂಪತಿ ಸನ್ಮಾನಿಸಿ ಮಾತನಾಡಿದರು.

ಸಾಮಾಜಿಕ ಕ್ಷೇತ್ರದಲ್ಲಿ ದೇಶವನ್ನು ಮುನ್ನೆಡೆಸಿದ ದೇವೇಗೌಡರು ನಾಡು ಕಂಡ ಶೇಷ್ಠ ರಾಜಕಾರಣಿ. ರಾಜ್ಯದ ಅಭಿವೃದ್ದಿ ಕುರಿತು ಅವರ ಮನಸ್ಸಿನಲ್ಲಿ ಹಲವಾರು ಚಿಂತನೆಗಳಿವೆ. ಹಗಲಿರುಳು ಸಂಪೂರ್ಣ ಕ್ಷಣಗಳನ್ನು ರಾಜಕೀಯ ಜೀವನಕ್ಕೆ ಮೀಸಲು ಇಟ್ಟಿದ್ದಾರೆ. ದೇವೇಗೌಡರ ಶ್ರಮ, ಸಾಧನೆ ಎಲ್ಲರಿಗೂ ಗೊತ್ತು. ಆದರೆ ಅವರ ಸಾಧನೆಗೆ ಪ್ರತಿಫಲ ಸಿಗಲ್ಲಿಲ್ಲ ಎಂದು ಹೇಳಿದರು.

ಹಣಕ್ಕೆ ಬೆಲೆ ಕೊಡದೆ ತತ್ವ, ಆದರ್ಶ ಮೂಲಕ ರಾಜಕಾರಣ ಮಾಡಿದರು. ಪ್ರತಿಯೊಬ್ಬರು ತತ್ವ ಸಿದ್ದಾಂತ, ಒಳ್ಳೆತನದಲ್ಲಿ ಬದುಕಬೇಕು. ದೇವೇಗೌಡರ ಜೀವನ ಚರಿತ್ರೆ ಓದಬೇಕು ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ದುಬೈ ಕನ್ನಡಿಗರು ನನ್ನ, ನನ್ನ ಪತ್ನಿಗೆ ತೋರಿಸಿದ ಗೌರವಕ್ಕೆ ತಲೆಬಾಗಿ ನಮಸ್ಕಾರ ಮಾಡುತ್ತೇನೆ. ನಾನು ಒಬ್ಬ ಕನ್ನಡಿಗ, ನನಗೆ 91ವರ್ಷವಾಗಿದೆ. ನಾನಾ ಸಮಸ್ಯೆಗಳು ನನ್ನ ಮುಂದೆ ಬರುತ್ತವೆ. ರಾಜ್ಯದ ಪರಿಸ್ಥಿತಿ ಕಳವಳ ಉಂಟು ಮಾಡಿದೆ ಎಂದು ಹೇಳಿದರು.

ನನ್ನ ಸಮಾಜದ ಗುರುಗಳು ದರ್ಶನ ಪಡೆಯಲು ನಾನು ಬರಿಕಾಲಿನಲ್ಲಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, ದೇವೇಗೌಡರವರ ವಿದ್ವತ್ತು ಬಹಳ ದೊಡ್ಡದು. ಗೌಡರು ಲೋಕಸಭೆಯಲ್ಲಿ ಮಾತನಾಡುವಾಗ ಬೆರಗುಗೊಳಿಸುವ ಸಂಗತಿಗಳನ್ನು ಬಿಚ್ಚಿಡುತ್ತಾರೆ. ಒಬ್ಬ ರಾಜಕಾರಣಿ ಬದ್ಧತೆ ಇದ್ದರೆ ಉನ್ನತ ಸ್ಥಾನ ಲಭಿಸುತ್ತದೆ ಎಂಬುದಕ್ಕೆ ದೇವೇಗೌಡರು ಸಾಕ್ಷಿ ಎಂದರು.

1994ರಿಂದ 96ರ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದರು. ಪ್ರಧಾನಿಯಾಗಿ ದೆಹಲಿ ಹೋದರು. ಕರ್ನಾಟಕದಲ್ಲಿ ಇದ್ದಿದ್ದರೆ ರಾಜ್ಯ ಅಭಿವೃದ್ದಿಯ ಚಿತ್ರಣವೆ ಬದಲಾಗುತ್ತಿತ್ತು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ದೇವೇಗೌಡರ ಜೀವನ ಸಾಧನೆಯ ಸಾಕ್ಷ ಚಿತ್ರ ಪ್ರದರ್ಶನ ಮಾಡಲಾಯಿತು.

ಕನ್ನಡಿಗರ ಕನ್ನಡ ಕೂಟ ದುಬೈ ಅಧ್ಯಕ್ಷ ಸಾಧನ್ ದಾಸ್, ಅಭಿಮಾನಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ಟಿ.ವೆಂಕಟೇಶ್, ಅನಿವಾಸಿ ಉದ್ಯಮಿ ಜಫ್ರುಲ್ಲಾ ಖಾನ್, ಅಮೆರಿಕ ಕನ್ನಡ ಕೂಟಗಳ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಡಾ.ಹಳೇಕೋಟೆ ವಿಶ್ವಮಿತ್ರ, ಓಮನ್ ಕನ್ನಡಿಗ ಉಪಾಧ್ಯಕ್ಷ ರಘುನಾಥ್ ಪ್ರಭು, ದುಬೈ ಕನ್ನಡ ಕೂಟದ ಇಬ್ರಾಹಿಂ ಕಲೀಲ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net