ಚನ್ನಪಟ್ಟಣ ಚುನಾವಣಾ ಅಖಾಡಕ್ಕೆ ದೇವೇಗೌಡ ಲಗ್ಗೆ

HD Devegowda
Published on

ಬೆಂಗಳೂರು: ಹೈ ಪ್ರೋೈಲ್ ಕ್ಷೇತ್ರವಾದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೊಮ್ಮಗನನ್ನು ಗೆಲ್ಲಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಂಗಳವಾರ ಚುನಾವಣಾ ರಣರಂಗಕ್ಕೆ ಇಳಿಯಲಿದ್ದಾರೆ.

ಆಂಬುಲೆನ್ಸ್‌ನಲ್ಲಿ ದೇವೇಗೌಡರು ಬಂದು ಪ್ರಚಾರ ನಡೆಸಲಿದ್ದಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯ ಹೇಳಿಕೆ, ನಿಖಿಲ್ ಹಾಗೂ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ದೇವೇಗೌಡರು ಚುನಾವಣಾ ರಂಗ ಪ್ರವೇಶ ಮಾಡಲಿದ್ದಾರೆ.

ಚನ್ನಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ 11.30 ರಿಂದ ಸಂಜೆ 6.30ರ ವರೆಗೆ ಬಿಡುವಿಲ್ಲದೇ ಚುನಾವಣಾ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ‘ಚನ್ನಪಟ್ಟಣ ಜನಸೇವಕನಿಗೆ ಬೆಂಬಲವಿರಲಿ’ ಟ್ಯಾಗ್ ಲೈನ್‌ನಲ್ಲಿ ದೇವೇಗೌಡರು ಪ್ರಚಾರ ನಡೆಸಲಿದ್ದಾರೆ.

ಈ ಹಿಂದೆ ಪಕ್ಷ ಸಂಕಷ್ಟದಲ್ಲಿದ್ದಾಗ ಮತ್ತು ಅಭ್ಯರ್ಥಿಗಳು ವೀಕ್ ಆಗಿದ್ದಾಗ ತಮ್ಮ ಆರೋಗ್ಯ ಹಾಗೂ ವಯಸ್ಸನ್ನೂ ಲೆಕ್ಕಿಸದೇ ದೇವೇಗೌಡರು ಚುನಾವಣಾ ಪ್ರಚಾರಕ್ಕಿಳಿದಿದ್ದರು. ಈ ಬಾರಿಯೂ ಕೂಡ ಮೊಮ್ಮಗನ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ನಾನಿನ್ನೂ ಬದುಕಿದ್ದೇನೆ. ಪಕ್ಷ ಉಳಿಸುತ್ತೇನೆ ಎಂದು ಶಪಥ ಮಾಡಿರುವ ದೇವೇಗೌಡರು ಚನ್ನಪಟ್ಟಣದಲ್ಲಿ ಚುನಾವಣಾ ಕಣ ರಂಗೇರಸುವುದಂತೂ ಖಚಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net