ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ; ಮಾಜಿ ಎಂಎಲ್‌ಸಿ ಡಿ.ಎಸ್. ವೀರಯ್ಯ ಸಿಐಡಿ ಬಲೆಗೆ

veera
Published on

ಬೆಂಗಳೂರು: ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ಹಗರಣ ಸಂಬಂಧ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಮುಡಾ ಹಗರಣ ವಿರುದ್ಧ ಬಿಜೆಪಿ ಮೈಸೂರಿನಲ್ಲಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಡಿ.ಎಸ್. ವೀರಯ್ಯ ಭಾಗವಹಿಸಿದ್ದರು. ಅಲ್ಲಿಂದ ವಾಪಸ್ ಬೆಂಗಳೂರಿಗೆ ಬರುವಾಗ ಮೈಸೂರು ರಸ್ತೆ ಕುಂಬಳಗೋಡು ಸಮೀಪದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇ ಟೋಲ್ ಬಳಿ ವೀರಯ್ಯ ಅವರನ್ನು ಬಂಧಿಸಿದ್ದಾರೆ.

2021ರಿಂದ 2023ರ ನಡುವೆ ನಿಗಮದ ಅಧ್ಯಕ್ಷರಾಗಿದ್ದ ವೀರಯ್ಯ, 47.10 ಕೋಟಿ ರೂ. ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. ಅವ್ಯವಹಾರ ಪ್ರಕರಣ ಸಂಬಂಧ ಈಗಾಗಲೇ ನಿಗಮದ ಎಂ.ಡಿ. ಶಂಕರಪ್ಪ ಅವರನ್ನು ಸಿಐಡಿ ಬಂಧಿಸಿ ತೀವ್ರ ವಿಚಾರಣೆ ನಡೆಸಿತ್ತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಟರ್ಮಿನಲ್ ಅಭಿವೃದ್ಧಿ ಕಾಮಗಾರಿ ಟೆಂಡರ್‌ಗಳನ್ನು ಪಡೆಯಲಾಗಿತ್ತು. ಮಂಡ್ಯ ಮೂಲದ ಮೂರು ಕಂಪನಿಗಳಿಗೆ ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು.

ತುಂಡು ಗುತ್ತಿಗೆ ಪಡೆದ ಗುತ್ತಿಗೆ ಸಂಸ್ಥೆಗಳು ಕಾಮಗಾರಿಯನ್ನೇ ನಡೆಸಿರಲಿಲ್ಲ. ಬದಲಿಗೆ ನಕಲಿ ಬಿಲ್‌ಗಳನ್ನು ಸೃಷ್ಟಿಸಿಕೊಂಡು ಅನುದಾನ ಮಂಜೂರಾತಿಗೆ ಕೋರಿದ್ದವು. ಖುದ್ದು ಸ್ಥಳ ಪರಿಶೀಲನೆ ನಡೆಸದೆ ಅಕ್ರಮವನ್ನು ಪರಿಗಣಿಸದೇ ಅಂದಿನ ಎಂ.ಡಿ. ಶಂಕರಪ್ಪ ನಕಲಿ ಬಿಲ್‌ಗಳಿಗೆ ಸಹಿ ಹಾಕಿ ಅನುದಾನ ಮಂಜೂರು ಮಾಡಿದ್ದರು. ಈ ಮೂಲಕ 47.10 ಕೋಟಿ ರೂ. ಅವ್ಯವಹಾರಕ್ಕೆ ನೇರ ಕಾರಣವಾಗಿದ್ದರು. ಕಾಮಗಾರಿ ಗುಣಮಟ್ಟದ ಸರ್ಟಿಫಿಕೇಟ್ ನೀಡಿದ ಬಳಿಕವಷ್ಟೆ ಗುತ್ತಿಗೆದಾರರಿಗೆ ಅನುದಾನ ಮಂಜೂರಾಗಬೇಕೆಂಬ ನಿಯಮವಿದೆ. ಇದಕ್ಕಾಗಿ ಡಿಡಿಯುಟಿಟಿಎಲ್‌ನಲ್ಲಿ ಪ್ರತ್ಯೇಕ ವಿಭಾಗ ಸಹ ಇತ್ತು. ಆದರೂ ಶಂಕರಪ್ಪ ವ್ಯಾಪ್ತಿ ಮೀರಿ ನಕಲಿ ದಾಖಲೆಗಳಿಗೆ ಸಹಿ ಮಾಡಿ ಹಣ ಮಂಜೂರು ಮಾಡಿದ್ದರು. ಇದರ ಲಾಭವನ್ನು ಅಂದಿನ ನಿಗಮದ ಅಧ್ಯಕ್ಷ ಡಿ.ಎಸ್. ವೀರಯ್ಯ ಸಹ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net