ಹಬ್ಬದ ದಿನವೇ ಏನಿದು ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’!?

DHPM F
Published on

ಬೆಂಗಳೂರು: ಇಂದು ವರ ಮಹಾಲಕ್ಷ್ಮೀ ಹಬ್ಬ. ಇವತ್ತೇ ಇಲ್ಲೊಂದಿಷ್ಟು ಮಂದಿ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಎಂದಿದ್ದಾರೆ. ಮಾತ್ರವಲ್ಲ, ಹಾಗೊಂದು ಪೋಸ್ಟರ್​ ಕೂಡ ಬಿಟ್ಟಿದ್ದಾರೆ. ಇದನ್ನೆಲ್ಲ ನೋಡಿದವರಿಗೆ "ಹಬ್ಬದ ದಿನವೇ ಏನಿದು ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’!?" ಎಂದನಿಸಿದರೂ ಅಚ್ಚರಿ ಏನಿಲ್ಲ.

ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣ ಚಿತ್ರತಂಡ. ಈ ತಂಡದಿಂದ ಮೂಡಿಬರುತ್ತಿರುವ ಸಿನಿಮಾ ಶೀರ್ಷಿಕೆಯೇ ಹಬ್ಬದ ದಿನವೇ ಏನಿದು ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’. ಶುಭದಿನವಾದ ಇಂದು ಚಿತ್ರತಂಡ ಈ ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಿದೆ. ಚಿತ್ರಸಾಹಿತಿ ಕವಿರತ್ನ ವಿ.ನಾಗೇಂದ್ರ ಪ್ರಸಾದ್ ಬೆಂಬಲದೊಂದಿಗೆ ಈ ಚಿತ್ರ ಮೂಡಿಬರುತ್ತಿದೆ.

ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ, 'ಸೆಕೆಂಡ್ ಹಾಫ್', 'ಗಾಂಧಿ ಮತ್ತು ನೋಟು' ಸಿನಿಮಾದ ಬರಹಗಾರರಾಗಿ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಗುರುಪ್ರಸಾದ್ ಚಂದ್ರಶೇಖರ್ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನಕ್ಕಿಳಿದಿದ್ದಾರೆ.

ಸೋಷಿಯೋ ಪೊಲಿಟಿಕಲ್ ಲಿಂಗ್ವಿಸ್ಟಿಕ್ ಡ್ರಾಮಾ ಕಥಾಹಂದರ ಹೊಂದಿರುವ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಸಿನಿಮಾ ಶೂಟಿಂಗ್ ಹಂತದಲ್ಲಿದ್ದು, ಕವಿರತ್ನ ವಿ.ನಾಗೇಂದ್ರ ಪ್ರಸಾದ್, ಬಾಲ ರಾಜವಾಡಿ, ವೈಜನಾಥ್ ಬಿರಾದಾರ್, ಅಶ್ವಿತಾ ಹೆಗ್ಡೆ, ಡಿಂಪನ ಜೀವನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾಷೆ ವಿಚಾರದ ಸುತ್ತ ಸಾಗುವ ಈ ಚಿತ್ರಕ್ಕೆ ಬಿ.ಶಿವಶಂಕರ್, ದತ್ತಾತ್ರೇಯ ವಿ ಜಮಾದಾರ್ ಬಂಡವಾಳ ಹೂಡಿದ್ದಾರೆ.

ಶಿವಶಂಕರ್ ನೂರಬಂಡ ಛಾಯಾಗ್ರಹಣ, ಚರಣ್ ಅರ್ಜುನ್ ಸಂಗೀತ, ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. 'ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ' ಸಿನಿಮಾ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ತಯಾರಾಗುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿಯೂ ಹೊಸ ಪೋಸ್ಟರ್ ಹಬ್ಬದ ವಿಶೇಷವಾಗಿ ರಿಲೀಸ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net