23ರಂದು ದೇವಾಂಗ ಸಮಾಜದ ಸುವರ್ಣ ಮಹೋತ್ಸವ

Malenadu Devanga Samaja
Published on

ಶಿವಮೊಗ್ಗ: ಮಲೆನಾಡು ದೇವಾಂಗ ಸಮಾಜದ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಸಮಾರಂಭ ಫೆ.23ರಂದು ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಮಾಜದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ಹೇಳಿದರು.

ಹಂಪಿ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ ಮತ್ತು ಧಾರವಾಡ ಜಿಲ್ಲೆ ಕವಲಗೇರಿ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಟ್ಟಡ, ರಾಜ್ಯಸಭಾ ಸದಸ್ಯ ಡಾ. ಕೆ.ನಾರಾಯಣ್ ಕಾರ್ಯಕ್ರಮ ಉದ್ಘಾಟಿಸುವವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಾನಿಗಳ ನಾಮಫಲಕವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ, ದಾನಿಗಳ ಛಾಯಾಚಿತ್ರವನ್ನು ಶಾಸಕಿ ಶಾರದಾ ಪೂರ್ಯಾನಾಯ್ಕ ಅನಾವರಣಗೊಳಿಸುವರು. ಇದೇ ವೇಳೆ ಎಂಎಲ್‌ಸಿ ಉಮಾಶ್ರೀ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಸಾಧಕರಿಗೆ ಸನ್ಮಾನ, ಅಖಿಲ ಭಾರತ ದೇವಾಂಗ ಸಂಘದ ಅಧ್ಯಕ್ಷ ಅರುಣ್ ವರಾಡೆ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ದಾನಿಗಳಿಗೆ ಸನ್ಮಾನ ನೆರವೇರಿಸುವರು ಎಂದರು.

ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಡಿ.ನಾಗರಾಜ್, ನಟ ಶ್ರೀನಿವಾಸಮೂರ್ತಿ, ಲೇಖಕ ರಮೇಶ್ ಬಾಬು ಯಾಳಗಿ, ಡಿಆರ್‌ಡಿಒ ಡೈರೆಕ್ಟರ್ ಜನರಲ್ ಡಾ. ಎಸ್.ಗುರುಪ್ರಸಾದ್, ಮೇಜರ್ ಎಚ್.ಆರ್.ಮಧುಸೂಧನ್ ಅವರನ್ನು ಸನ್ಮಾನಿಸಲಾಗುವುದು. ಸಮಾಜದ ಹಿರಿಯರಾದ ಶಿವಮೊಗ್ಗದ ಹುಚ್ಚರಾಯಪ್ಪ, ಎಚ್.ತಿಮ್ಮಪ್ಪ, ಡಿ.ತಿಮ್ಮಪ್ಪ, ತರಿಕೆರೆಯ ಟಿ.ಕೆ.ಶಂಕರಪ್ಪ, ಬಿರೂರಿನ ಅರೇಕಲ್ ಆರ್ ಕಾಂತರಾಜ್, ಕಡೂರಿನ ಬೆಂಕಿ ಶೇಖರಪ್ಪ ಅವರನ್ನು ಗೌರವಿಸಲಾಗುವುದು ಎಂದು ಹೇಳಿದರು.

ಮಹೋತ್ಸವ ಕಟ್ಟಡವನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸರ್ಕಾರದಿಂದ 75 ಲಕ್ಷ ರೂ. ಬಿಡುಗಡೆ ಆಗಿದ್ದು, ಸಮಾಜ ಮತ್ತು ದಾನಿಗಳಿಂದ 25 ಲಕ್ಷ ರೂ. ದೇಣಿಗೆ ಸಂಗ್ರಹಿಸಿ 50 ಚದರ ವಿಸ್ತೀರ್ಣದ ಕಟ್ಟಡದಲ್ಲಿ 200ರಿಂದ 250 ಜನ ಕೂರಬಹುದಾದ ಮಿನಿ ಹಾಲ್ ಕೂಡಾ ನಿರ್ಮಿಸಲಾಗಿದೆ ಎಂದರು.

ಸಮಿತಿ ಉಪಾಧ್ಯಕ್ಷ ಯು.ರಾಮಪ್ಪ ರಾಂಪುರ, ಪ್ರಧಾನ ಕಾರ್ಯದರ್ಶಿ ಜಿ.ಮೋಹನ್ ಮೂರ್ತಿ, ಖಜಾಂಚಿ ಎಂ.ಗುರುಶಾಂತಪ್ಪ ಆಲದಹಳ್ಳಿ, ಸತೀಶ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net