ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ

Untitled design (75)
ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಜಿಲ್ಲಾ ಗಂಗಾಮತ ಸಮಾಜ ಸೇವಾ ಸಂಘ ಮನವಿ ಸಲ್ಲಿಸಿತು. ಜಿಲ್ಲಾ ಗೌರವಾಧ್ಯಕ್ಷ ಪ್ರಭಾಕರ ಅಂಬಿಗೇರ್, ತಾಲೂಕು ಅಧ್ಯಕ್ಷ ಕೆ.ಸಾಬಣ್ಣ ಗೂಗಲ್, ರಾಘವೇಂದ್ರ ಕೋಲ್ಕರ್, ಅಮರೇಶ ಮಾನ್ವಿಕರ್, ಪರಮಾನಂದ ದೇಸಾಯಿ, ಸಿದ್ದಪ್ಪ ಅರಕೇರಾ ಇತರರಿದ್ದರು.
Published on

ದೇವದುರ್ಗ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಅಂಜಲಿ ಅಂಬಿಗೇರ್ ಕಗ್ಗೊಲೆ ಖಂಡಿಸಿ ಜಿಲ್ಲಾ ಗಂಗಾಮತ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಮುಖಂಡರು ಮಿನಿವಿಧಾನಸೌಧ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಅಂಜಲಿ ಅಂಬಿಗೇರ್ ಕೊಲೆ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ ಪದೇಪದೆ ಇಂಥ ಘಟನೆಗಳು ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎನ್ನುವ ಯುವತಿಯ ಕೊಲೆಯಾಗಿತ್ತು. ಇಂಥ ಘಟನೆಗಳಿಂದ ಮಹಿಳೆಯರು ಭಯಭೀತರಾಗಿದ್ದು ಹೊರಗಡೆ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವತಿಯರ ಕೊಲೆ ಘಟನೆಯಿಂದ ಪಾಲಕರ ವರ್ಗಕೂಡ ಭೀತಿಗೆ ಒಳಗಾಗಿದೆ. ಮಕ್ಕಳನ್ನು ಶಾಲಾ ಕಾಲೇಜಿಗೆ ಕಳಿಸಲು ಹಿಂದೇಟು ಹಾಕುವಂತಾಗಿದೆ. ಇಂಥ ಘಟನೆಗಳು ನಡೆದಾಗ ಆರೋಪಿಗೆ ಕಠಿಣಶಿಕ್ಷೆ ನೀಡದಿರುವುದೇ ಹತ್ಯೆ ಘಟನೆಗಳು ಮರುಕಳಿಸುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಮೂಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಲೆಗೈದನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಂಜಲಿ ಅಂಬಿಗೇರ್ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವ ಜತೆಗೆ ಪರಿಹಾರ ಕೊಡಬೇಕು. ಅವರ ಮನೆಯ ಒಬ್ಬ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಇಂಥ ಘಟನೆಗೆ ಕಾರಣರಾದವರನ್ನು ಎನ್ಕೌಂಟರ್ ಮಾಡುವ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಪ್ರಭಾಕರ ಅಂಬಿಗೇರ್, ತಾಲೂಕು ಅಧ್ಯಕ್ಷ ಕೆ.ಸಾಬಣ್ಣ ಗೂಗಲ್, ರಾಘವೇಂದ್ರ ಕೋಲ್ಕರ್, ಅಮರೇಶ ಮಾನ್ವಿಕರ್, ಪರಮಾನಂದ ದೇಸಾಯಿ, ಸಿದ್ದಪ್ಪ ಅರಕೇರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net