

ಹುಬ್ಬಳ್ಳಿ: ಮುಖ್ಯಮಂತ್ರಿ ಖುರ್ಚಿಗೆ 2500 ಕೋಟಿ ರೂ. ಮತ್ತು ಮಂತ್ರಿ ಸ್ಥಾನಕ್ಕೆ 100 ಕೋಟಿ ರೂ. ಕೇಳಿದ್ದಾರೆಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರು ಗಂಭೀರ ಆರೋಪ ಮಾಡಿದ್ದಾರೆ. ಇಷ್ಟಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸುಮ್ಮನೆ ಕುಳಿತಿವೆ. ತಕ್ಷಣ ಯತ್ನಾಳ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಬೇಕು. ನಾನು ಮುಖ್ಯಮಂತ್ರಿ ಅವರ ರಾಜೀನಾಮೆ ಕೇಳುವುದಿಲ್ಲ. ಮುಖ್ಯಮಂತ್ರಿ ರಾಜೀನಾಮೆ ಪಡೆಯುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷದ ಗೌರವ ಉಳಿಸಿಕೊಳ್ಳುವುದು ಆ ಪಕ್ಷದ ಮುಖಂಡರಿಗೆ ಬಿಟ್ಟ ವಿಚಾರ. ಬಿಜೆಪಿ ಸರ್ಕಾರ ರಚನೆಗೊಂಡಿರುವುದೇ ಶಾಸಕರನ್ನು ಖರೀದಿಸುವುದರಿಂದ. ಈ ಸರ್ಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಬಿಜೆಪಿ ರಾಜ್ಯಾಧ್ಯಕ್ಷರ ಕೈವಾಡವೂ ಭ್ರಷ್ಟಾಚಾರದಲ್ಲಿ ಇರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಹೋಟೆಲ್ ಗಳಲ್ಲಿ ಉಪಹಾರಕ್ಕೆ ದರ ನಿಗದಿ ಮಾಡಿದಂತೆ ಈ ಸರ್ಕಾರ ಎಲ್ಲ ರಾಜಕೀಯ ಹಾಗೂ ಸರ್ಕಾರಿ ಹುದ್ದೆಗಳಿಗೆ ದರ ನಿಗದಿಪಡಿಸಿದೆ.ನನ್ನ ೪೦ ವರ್ಷದ ರಾಜಕಾರಣದಲ್ಲಿ ಈ ರೀತಿಯ ಗಂಭೀರ ಆಪಾದನೆ ಕೇಳಿರಲಿಲ್ಲ. ಬಿಜೆಪಿ ಸರ್ಕಾರದ ಎಲ್ಲ ಹಗರಣಗಳ ಮಾಹಿತಿಯನ್ನು ಜನರಿಗೆ ತಲುಪಿಸುತ್ತೇವೆ. ಸತ್ಯಾಂಶ ಹೊರಬರುವವರೆಗೂ ಹೋರಾಟ ಮಾಡುತ್ತೇವೆ. ಹೋರಾಟದ ರೂಪರೇಷೆ ಶೀಘ್ರ ನಿರ್ಧರಿಸುತ್ತೇವೆ.