16 ಐಎಎಸ್​​​​ಗಳಿದ್ದರೂ ಬಿಬಿಎಂಪಿಯಿಂದ ಅಭಿವೃದ್ಧಿ ನಿಧಾನ

bbmp office
Published on

ಆರ್​​​​.ತುಳಸಿಕುಮಾರ್​

ಬೆಂಗಳೂರು: ರಾಜ್ಯದ ಅತಿದೊಡ್ಡ ಸ್ಥಳೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಕಾಣದೆ ನಾಲ್ಕೂವರೆ ವರ್ಷ ಅವಧಿ ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಜನರಿಗೆ ಸಿಗಬೇಕಿದ್ದ ನಾಗರಿಕ ಸೌಲಭ್ಯಗಳು ಕಡತ ಬಿಟ್ಟು ಮುಂದಡಿ ಇಟ್ಟಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಪಾಲಿಕೆಯಲ್ಲಿ ಬರೋಬರಿ 16 ಮಂದಿ ಐಎಎಸ್ ಅಧಿಕಾರಿಗಳಿದ್ದರೂ, ಅಭಿವೃದ್ಧಿಯಿಂದ ದೂರ ಉಳಿದಿರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ.

ರಾಜಧಾನಿಯ ಜನಸಂಖ್ಯೆ ಒಂದೂವರೆ ಕೋಟಿ ಸನಿಹಕ್ಕೆ ಬಂದಿದೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ಸವಾಲಿನ ಕೆಲಸ. ಚುನಾಯಿತ ಜನಪ್ರತಿನಿಧಿಗಳ ಗೈರಿನಲ್ಲಿ ಆಡಳಿತ ಸೊರಗಬಾರದು ಎಂಬ ಉದ್ದೇಶದಿಂದಲೇ, ಸರ್ಕಾರ ಬಿಬಿಎಂಪಿಗೆ ಹೆಚ್ಚಿನ ಸಂಖ್ಯೆಯ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದೆ. ಜತೆಗೆ ಹೆಚ್ಚಿನ ಅಧಿಕಾರವನ್ನೂ ನೀಡಿದೆ. ಆದರೂ, ಸಂಸ್ಥೆಯ ಆದಾಯಕ್ಕೆ ತಕ್ಕಂತೆ ಖರ್ಚು-ವೆಚ್ಚಗಳನ್ನು ಸರಿದೂಗಿಸಿಕೊಂಡು ಆಡಳಿತವನ್ನು ಸಮರ್ಪಕವಾಗಿ ನಡೆಸುವ ಛಾತಿ ಕಾಣಿಸುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಬಿಬಿಎಂಪಿಯ ಆಡಳಿತ ವ್ಯವಸ್ಥೆಯಡಿ ಮುಖ್ಯ ಆಯುಕ್ತರು ನಿರ್ಣಾಯ ಪಾತ್ರ ವಹಿಸುತ್ತಾರೆ. ಆರು ಮಂದಿ ವಿಶೇಷ ಆಯುಕ್ತರು ವಿವಿಧ ವಿಭಾಗಗಳನ್ನು ಮುನ್ನಡೆಸುತ್ತಿದ್ದಾರೆ. ಇವರ ಜತೆಗೆ 8 ವಲಯ ಆಯುಕ್ತರ ಹುದ್ದೆಗೆ ಐಎಎಸ್ ಅಧಿಕಾರಿಗಳನ್ನೇ ನಿಯೋಜಿಸಲಾಗಿದೆ. ಇವರೆಲ್ಲರ ಮೇಲ್ವಿಚಾರಣೆ, ನೀತಿ-ನಿರೂಪಣೆ ಹಾಗೂ ಹಣಕಾಸು ಸಂಬಂಧಿತ ನಿರ್ಧಾರಗಳು ಆಡಳಿತಾಧಿಕಾರಿ ಹೊಣೆ ವಹಿಸಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ವ್ಯಪ್ತಿಗೆ ಬರುತ್ತದೆ. ಅಂದರೆ ಪಾಲಿಕೆಯನ್ನು ಸಮರ್ಪಕವಾಗಿ ಮುನ್ನಡೆಸಲು ಆಡಳಿತ ವ್ಯವಸ್ಥೆ ಸರಿಯಾಗಿ ರಚಿಸಲಾಗಿದೆ. ಆದರೆ, ಆ ಹುದ್ದೆಗಳನ್ನು ವಹಿಸಿರುವವರು ತಮ್ಮ ವಿಭಾಗಕ್ಕೆ ಸಂಬಂಧಿಸಿದ ವಿಷಯ ಹಾಗೂ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಿದೆ. ಇದರಲ್ಲಿ ಅವರೆಲ್ಲರೂ ನಿರತರಾಗಿದ್ದರೂ, ಅಂತಿಮ ನಿರ್ಧಾರ ಮುಖ್ಯ ಆಯುಕ್ತರಿಂದ ಆದೇಶಕ್ಕಾಗಿ ಕಾಯುವ ಸ್ಥಿತಿ ಇದೆ.

ಸಭೆ, ಚರ್ಚೆಗೆ ಸಮಯ ಪೋಲು:

ಸರ್ಕಾರದ ವ್ಯವಸ್ಥೆಯಂತೆ ಪಾಲಿಕೆಯಲ್ಲೂ ಹಿರಿಯ ಅಧಿಕಾರಿಗಳು ನಿತ್ಯವೂ ಸಭೆ, ಚರ್ಚೆಗಳನ್ನು ನಡೆಸುವುದುಂಟು. ದೈನಂದಿನ ಕಾರ್ಯದ ಜತೆಗೆ ಯೋಜನೆ, ಕಾಮಗಾರಿಗಳ ಬಗ್ಗೆ ಪರಾಮರ್ಶೆಯೂ ನಡೆಯುತ್ತಿದೆ. ಆದರೆ, ಸಭೆ, ಚರ್ಚೆಯಿಂದ ಹೊರಬರುವ ಅಂತಿಮ ನಿರ್ಧಾರ ಕಾರ್ಯರೂಪಕ್ಕೆ ಬರುವಲ್ಲಿ ನಿಧಾನವಾಗುತ್ತಿದೆ. ಹಣಕಾಸು ಸಮಸ್ಯೆ, ನೀತಿ-ನಿರೂಪಣೆ, ಕಾನೂನು ಹಾಗೂ ಸರ್ಕಾರದ ಸೂಚನೆಗಳ ಪಾಲನೆಯನ್ನು ಈ ಅಧಿಕಾರಿಗಳೇ ವಿವೇಚನೆ ಬಳಸಿ ಕೈಗೊಳ್ಳಬೇಕಿದೆ. ಆದರೆ, ಆ ರೀತಿ ಆಗದ ಕಾರಣ ನಗರದಲ್ಲಿ ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹಲವು ಪ್ರಮುಖ ಕಾಮಗಾರಿಗಳು ಕೂಡ ಕುಂಟುತ್ತಾ ಸಾಗಿವೆ. ಇದರಿಂದ ನಾಗರಿಕರಿಗೆ ಸಮಸ್ಯೆಯಾಗುತ್ತಿದ್ದರೂ, ಐಎಎಸ್ ಅಧಿಕಾರಿಗಳು ಎಸಿ ಕಚೇರಿ ಬಿಟ್ಟು ಹೊರಗೆ ಬಂದು ಕಾಮಗಾರಿಗಳ ಮೇಲ್ವಿಚಾರಣೆ ಅಥವಾ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿಲ್ಲ ಎಂಬ ಆಕ್ಷೇಪವನ್ನು ನಾಗರಿಕರಿಂದ ಕೇಳಿಬಂದಿದೆ.

ಕೇಂದ್ರ ಕಚೇರಿಯಲ್ಲೇ ಸಮಯ ವ್ಯಯ:

ಐಎಎಸ್ ಅಧಿಕಾರಿಗಳೆಲ್ಲರೂ ಕೇಂದ್ರ ಕಚೇರಿಯಲ್ಲಿದ್ದು ಸಭೆ, ಚರ್ಚೆ, ವಿಡಿಯೋ ಸಂವಾದ ಹಾಗೂ ಕಡತ ಪರಿಶೀಲನೆಯಲ್ಲೇ ನಿರತರಾಗಿರುತ್ತಾರೆ. ಇದಕ್ಕೆಂದೇ ಹೆಚ್ಚು ಸಮಯ ವ್ಯಯವಾಗುತ್ತಿರುವುದರಿಂದ ತಮ್ಮ ವಿಭಾಗಕ್ಕೆ ಸಂಬಂಧಿಸಿದ ಯೋಜನೆ, ಕಾರ್ಯಕ್ರಮಗಳ ಸ್ಥಳಪರಿಶೀಲನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಮುಖ್ಯ ಆಯುಕ್ತರು, ಡಿಸಿಎಂ ನಗರ ಪ್ರದಕ್ಷಿಣೆ ವೇಳೆ ಸಾಥ್ ನೀಡುವುದು ಬಿಟ್ಟರೆ ಉಳಿದ ಸಮಯ ಕಚೇರಿಯಲ್ಲಿರುತ್ತಾರೆ. ಆಗಾಗ್ಗೆ ವಲಯ ಕಚೇರಿ, ಕಾಮಗಾರಿಗಳ ಪರಿಶೀಲನೆ ಮಾಡಿದ್ದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳಿಗೆ ಚುರುಕು ಪಡೆಯುತ್ತವೆ ಎಂಬ ಸಲಹೆ ನಾಗರಿಕರು ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕಾರ್ಯಕ್ರಮಗಳಿಗೆ ಗ್ರಹಣ:

ಪಾಲಿಕೆಯಿಂದ ಜನರಿಗೆ ಪ್ರತಿವರ್ಷವೂ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸಿ ತಲುಪಿಸುವ ಕೆಲಸ ಆಗುತ್ತಿದೆ. ಅದರಲ್ಲೂ ಪರಿಶಿಷ್ಟರಿಗೆ ಒಂದಿಷ್ಟು ಯೋಜನೆಗಳು ಮೀಸಲಿಡಲಾಗಿದೆ. ಹೊಲಿಗೆ ಯಂತ್ರ, ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು, ವಿವಿಧ ಪ್ರೋತ್ಸಾಹಧನ, ಒಂಟಿ ಮನೆ ನಿರ್ಮಾಣ, ವಾಹನ ವಿತರಣೆ, ಸಮುದಾಯ ಅಭಿವೃಧ್ಧಿ ಕಾರ್ಯಕ್ರಮಗಳು ಪ್ರಮುಖ. ಆದರೆ, 3-4 ವರ್ಷದಿಂದ ಲಾನುಭವಿಗಳಿಗೆ ಸರಿಯಾದ ಸೌಲಭ್ಯಗಳೇ ತಲುಪುತ್ತಿಲ್ಲ. ವಿವಿಧ ಕಾರಣವೊಡ್ಡಿ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿಕೊಂಡೇ ಬರಲಾಗುತ್ತಿದೆ. ಪ್ರಸ್ತುತ 2023-24ನೇ ಸಾಲಿನ ಲಾನುಭವಿಗಳ ಆಯ್ಕೆ ನಡೆದಿಲ್ಲ. ಆದರೂ, ಬಜೆಟ್‌ನಲ್ಲಿ ಪರಿಶಿಷ್ಟರಿಗೆ ಶೇ.22.75 ಹಣ ವೆಚ್ಚ ಮಾಡಲಾಗುತ್ತಿದೆ ಎಂಬ ಘೋಷಣೆ ಪೂರ್ಣವಾಗಿ ಕಾರ್ಯರೂಪಕ್ಕೆ ಬಾರದಿರುವುದು ಅಧಿಕಾರಿಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮೇಲ್ವಿಚಾರಣೆಗೆ ವಲಯ ಆಯುಕ್ತರ ಹಿಂದೇಟು:

ಬಿಬಿಎಂಪಿ ಪ್ರದೇಶ ವಿಸ್ತಾರವಾಗಿರುವುದರಿಂದ ಅಲ್ಲಿನ ಆಡಳಿತವನ್ನು ಚುರುಕುಗೊಳಿಸಲು 8 ವಲಯಗಳಿಗೆ ಒಬೊಬ್ಬ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ವಲಯ ಮಟ್ಟದಲ್ಲೇ ತೀರ್ಮಾನ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ವಾಸ್ತವಾಗಿ ಈ ಅಧಿಕಾರಿಗಳು ಕೇವಲ ಕಡತಕ್ಕೆ ಸಹಿ ಹಾಕಲಷ್ಟೇ ಸೀಮಿತವಾಗಿದ್ದು, ಪ್ರಮುಖ ತೀರ್ಮಾನಗಳಿಗಾಗಿ ಕೇಂದ್ರ ಕಚೇರಿಯತ್ತಲೇ ದೃಷ್ಟಿಹರಿಸುವ ಪದ್ಧತಿ ಮುಂದುವರಿದಿದೆ. ವಲಯದಲ್ಲಿ ನಡೆದಿರುವ ಪ್ರಮುಖ ಕಾಮಗಾರಿಗಳ ಪರಿಶೀಲನೆ/ಮೇಲ್ಚಿಚಾರಣೆ ನಡೆಸಲು ವಲಯ ಆಯುಕ್ತರು ಹಿಂದೇಟು ಹಾಕುತ್ತಿರುವುದರಿಂದ ಕೆಲಸ-ಕಾರ್ಯ ಸರಾಗಿ ನಡೆಯುತ್ತಿಲ್ಲ ಎಂಬುದಾಗಿ ಮಾರ್ಜಿ ಕಾರ್ಪೊರೇಟರ್‌ಗಳು ಆಕ್ಷೇಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net