

ಬೆಂಗಳೂರು: ಮುಡಾ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶಿಸಿದ್ದರಿಂದ ನ್ಯಾಯಾಂಗ ವ್ಯವಸ್ಥೆಗೆ ಅಪಮಾನಿಸುವ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು ಸೋತಾಗ ಇವಿಎಂ ಹಾಗೂ ಚುನಾವಣಾ ಆಯೋಗವನ್ನೇ ಅನುಮಾನಿಸುವುದು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದೂಷಿಸುವುದು.
ಇದು, ಕಾಂಗ್ರೆಸ್ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಬಗೆ. ಆದರೀಗ ಮುಡಾ ಹಗರಣದ ಕಪ್ಪು ಮಸಿ ಬಳಿದುಕೊಂಡು ನ್ಯಾಯಾಂಗ ವ್ಯವಸ್ಥೆಯಿಂದ ಸಿಎಂ ಸಿದ್ದರಾಮಯ್ಯ ಅಪರಾಧಿ ಸ್ಥಾನದಲ್ಲಿದ್ದಾರೆ.
ಸಿದ್ದರಾಮಯ್ಯ ಅವರ ಸುಪುತ್ರ ವಿಧಾನ ಪರಿಷತ್ ಸದಸ್ಯ ಡಾ.ಎಸ್.ಯತೀಂದ್ರ, ಕೆಲ ಕೋರ್ಟ್‌ಗಳು ಕೇಂದ್ರ ಸರ್ಕಾರದ ಮಾತು ಕೇಳುತ್ತಿವೆ ಎಂದು ಹೇಳುವ ಮೂಲಕ ದೇಶದ ಘನ ನ್ಯಾಯಾಂಗ ವ್ಯವಸ್ಥೆಯನ್ನೇ ಅವಮಾನಿಸಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯ ತಮ್ಮ ತಂದೆಯ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಿದ ಕಾರಣಕ್ಕೆ ಹತಾಶೆಯಿಂದ ನ್ಯಾಯಾಂಗ ವ್ಯವಸ್ಥೆಯನ್ನೇ ಅನುಮಾನಿಸಿ ನಿಂದಿಸುವ ಹೇಳಿಕೆ ನೀಡಿದ್ದಾರೆ.
ಯತೀಂದ್ರ ಅವರು ತಾವೊಬಬ್ ಮುಖ್ಯಮಂತ್ರಿ ಪುತ್ರ ಎಂಬ ಹಮ್ಮಿನಿಂದ ಮಾತನಾಡಿದಂತಿದೆ. ವಿಧಾನ ಪರಿಷತ್ ಸದಸ್ಯ ಸ್ಥಾನದ ಘನತೆಯನ್ನೂ ಅವರು ಕಳೆದಿದ್ದಾರೆ. ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ, ಸಂವಿಧಾನ ಅನುಮಾನಿಸಿ, ಅಪಮಾನಿಸಿದವರಿಗೆ ಕಾಲವೇ ಉತ್ತರ ಹೇಳಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಚುನಾವಣೆಗಳನ್ನು ಗೆಲ್ಲಲು ಯಾವ ರೀತಿಯ ಅಡ್ಡ ಮಾರ್ಗವನ್ನಾದರೂ ಹಿಡಿದು ಆಮಿಷವೊಡ್ಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಶಿಗ್ಗಾಂವಿ ಮತದಾರರನ್ನು ಸೆಳೆಯುವ ದೃಷ್ಟಿಯಿಂದ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆ ಮಾಡಿ ಮತ ಸೆಳೆಯವ ಹುನ್ನಾರ ನಡೆಸಿರುವುದು ವರದಿಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಈ ಹಿಂದೆ ಲೋಕಸಭಾ ಚುನಾವಣೆಯ ಮುನ್ನಾ ದಿನ ಮೂರು ತಿಂಗಳ ಗೃಹಲಕ್ಷ್ಮಿ ಹಣ ಜಮೆ ಮಾಡಿ ಮತ ಸೆಳೆಯಬಹುದೆಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ಸಿಗರಿಗೆ ನಾಡಿನ ಜನ ತಕ್ಕ ಪಾಠ ಕಲಿಸಿದ್ದರು.
ಇದೀಗ ಉಪ ಚುನಾವಣೆಯಲ್ಲೂ ಅಡ್ಡ ಮಾರ್ಗದ ಮೂಲಕ ಜನರ ಕಿವಿಗೆ ಹೂ ಇಡುವ ಪ್ರಯತ್ನಕ್ಕೆ ಮುಂದಾಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಈ ಕೂಡಲೇ ಚುನಾವಣಾ ಆಯೋಗ ಕಾನೂನು ಕ್ರಮಕೈಗೊಳ್ಳುವಂತೆ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.