ಗಾಜಾದಲ್ಲಿ ಹಸಿವಿನ ಹಾಹಾಕಾರ: ಎರಡು ಚೀಲ ಗೋಧಿ ಹಿಟ್ಟಿಗಾಗಿ ಮಗಳನ್ನೇ ಮದುವೆ ಮಾಡಿಸಿದ ತಂದೆ! ಯುದ್ಧ ಭೂಮಿಯ ಕರಾಳ ದರ್ಶನ | Gaza

ಯುದ್ಧಪೀಡಿತ ಗಾಜಾ (Gaza) ದಲ್ಲಿ ಹಸಿವಿನ ಅನಾಹುತ; ಕೇವಲ ಎರಡು ಚೀಲ ಗೋಧಿ ಹಿಟ್ಟಿಗಾಗಿ 14 ವರ್ಷದ ಮಗಳನ್ನು ಮದುವೆ ಮಾಡಿಸಿದ ತಂದೆ. ವಿಶ್ವಸಂಸ್ಥೆ ವರದಿ ಮಾಡಿದ ಗಾಜಾದ ಕರಾಳ ಚಿತ್ರಣ ಇಲ್ಲಿದೆ.
Representative image
ಸಾಂದರ್ಭಿಕ ಚಿತ್ರ
Published on

ಗಾಜಾ: ಯುದ್ಧವೆಂದರೆ ಕೇವಲ ಸತ್ತವರ ಸಂಖ್ಯೆಯಲ್ಲ, ಗುಂಡಿನ ಸದ್ದುಗಳಲ್ಲ. ಅಲ್ಲಿ ಬದುಕುಳಿಯುವವರ ನರಕಯಾತನೆ ಅದಕ್ಕಿಂತ ಭೀಕರವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಹೇಳಿಕೆಗೆ ಪುಷ್ಟಿ ಎಂಬಂತೆ ಯುದ್ಧಪೀಡಿತ ಗಾಜಾ ಪ್ರದೇಶದಲ್ಲಿ ಹಸಿವು ಮತ್ತು ಬಡತನ ಯಾವ ಮಟ್ಟಿಗೆ ಮಿತಿ ಮೀರಿದೆ ಎಂದರೆ, ಅಲ್ಲಿನ ತಂದೆ-ತಾಯಿಗಳು ತಮ್ಮ ಹೆಣ್ಣು ಮಕ್ಕಳನ್ನು ಊಟದ ತುತ್ತಿಗಾಗಿ, ಎರಡು ಚೀಲ ಹಿಟ್ಟಿಗಾಗಿ ಮದುವೆ ಮಾಡುತ್ತಿದ್ದಾಗಿ ತಿಳಿದು ಬಂದಿದೆ.

ಹೊಟ್ಟಗೆ ಹಿಟ್ಟು; ಮಗಳ ಕೊರಳಲ್ಲಿ ಮೂರು ಗಂಟು!

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಗಾಜಾದಲ್ಲಿ ಬಾಲ್ಯವಿವಾಹ ಹಾಗೂ ಬಲವಂತದ ಮದುವೆಗಳು ಹಿಂದೆಂದಿಗಿಂತಲೂ ಹೆಚ್ಚುತ್ತಿದ್ದು, 2026 ರ ಏಪ್ರಿಲ್‌ನಿಂದ ಜೂನ್‌ವರೆಗೆ ಬಾಲ್ಯವಿವಾಹ ಪ್ರಕರಣಗಳು ಬರೋಬ್ಬರಿ ಶೇಕಡಾ 123 ರಷ್ಟು ಹೆಚ್ಚಾಗಿವೆ.

ನಿರಾಶ್ರಿತರ ಶಿಬಿರದ ಮಹಿಳೆಯೊಬ್ಬರು ನೀಡಿರುವ ಹೇಳಿಕೆ ಈಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿದೆ. ಕಳೆದ ವರ್ಷ ತೀವ್ರ ಕ್ಷಾಮವಿದ್ದಾಗ, ಒಬ್ಬ ವ್ಯಕ್ತಿ ತನ್ನ 14 ವರ್ಷದ ಮಗಳನ್ನು ಕೇವಲ ಎರಡು ಚೀಲ ಗೋಧಿ ಹಿಟ್ಟಿನ ಬದಲಾಗಿ ಬೇರೆಯವರಿಗೆ ಮದುವೆ ಮಾಡಿಕೊಟ್ಟನು. ಆ ಹಿಟ್ಟಿನಿಂದಲಾದರೂ ಆ ಕುಟುಂಬದ ಇತರ ಮಕ್ಕಳಿಗೆ ಸ್ವಲ್ಪ ಊಟ ಸಿಗಲಿ ಎಂಬುದು ಆ ತಂದೆಯ ಅನಿವಾರ್ಯತೆಯಾಗಿತ್ತು ಎಂದು ಆ ಮಹಿಳೆ ಹೇಳಿದ್ದಾರೆ.

ಇದು ಕೇವಲ ಒಬ್ಬರ ಕತೆಯಲ್ಲ. ನಿರಾಶ್ರಿತರ ಶಿಬಿರಗಳಲ್ಲಿರುವ ಅನೇಕ ಕುಟುಂಬಗಳು ಇಂದು ಹೊಟ್ಟೆಪಾಡಿಗೆ ತಮ್ಮ ಮಕ್ಕಳ ಬಾಳನ್ನು ಬಲಿ ಕೊಡುತ್ತಿವೆ. ಯುದ್ಧಕ್ಕೂ ಮೊದಲು ಇಂತಹ ಸಮಾಜಘಾತಕ ಪದ್ಧತಿಗಳನ್ನು ಯಾರೂ ಊಹಿಸಿಯೂ ಇರಲಿಲ್ಲ ಎಂದು ವಿಶ್ವಸಂಸ್ಥೆ ವರದಿ ಜಗಜ್ಜಾಹೀರು ಮಾಡಿದೆ.

ಅನಾಥ ಮಕ್ಕಳ ಹೇಳತೀರದ ಕಷ್ಟ!

ಯುದ್ಧದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಬಾಲಕಿಯರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಗಾಜಾ ನಗರದ ಶಿಬಿರವೊಂದರಲ್ಲಿ ವಾಸವಿರುವ 14 ಮತ್ತು 15 ವರ್ಷ ವಯಸ್ಸಿನ ಇಬ್ಬರು ಬಾಲಕಿಯರ ತಂದೆ-ತಾಯಿಗಳು ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಆದರೆ ಅವರ ಚಿಕ್ಕಪ್ಪಂದಿರು, ಆ ಮಕ್ಕಳ ಜವಾಬ್ದಾರಿ ಹಾಗೂ ಖರ್ಚನ್ನು ಹೊತ್ತುಕೊಳ್ಳಲು ಇಷ್ಟವಿಲ್ಲದೆ, ಅವರನ್ನು ತೀರಾ ಚಿಕ್ಕ ವಯಸ್ಸಿನಲ್ಲೇ ಬಲವಂತವಾಗಿ ಮದುವೆ ಮಾಡಿಸಿ ಕಳುಹಿಸಿಬಿಟ್ಟಿದ್ದಾರೆ. "ಆ ಮಕ್ಕಳಿಗೆ ಮದುವೆ ಎಂದರೇನು? ಸಂಸಾರ ಎಂದರೆ ಏನು ಅಂತಾನೇ ಗೊತ್ತಿಲ್ಲ ಎಂದು ಸ್ಥಳೀಯ ಮಹಿಳೆಯರು ಕಣ್ಣೀರಿಡುತ್ತಾರೆ.

Also Read
‘ಪೆಡ್ಡಿ’ ಬಳಿಕ ‘ಪ್ಯಾರಾಡೈಸ್’ಗೂ ಗ್ಲಾಮರ್ ಆರೋಪ; ಕಯಾದು ಲೋಹರ್ ಬಗ್ಗೆ ನೆಟ್ಟಿಗರು ಹೇಳಿದ್ದೇನು? Paradise
Representative image

ಅತ್ಯಾಚಾರ ಆರೋಪಿಗಳೊಂದಿಗೇ ಮದುವೆ!

ಗಾಜಾದಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಸಮಾಜದ ಕಳಂಕ ಮತ್ತು ಅಪಖ್ಯಾತಿಯಿಂದ ಪಾರಾಗಲು, ಅತ್ಯಾಚಾರಕ್ಕೊಳಗಾದ ಬಾಲಕಿಯರನ್ನು ಕೆಲವೊಮ್ಮೆ ಅದೇ ದೌರ್ಜನ್ಯವೆಸಗಿದ ಕಾಮುಕರೊಂದಿಗೆ ವಿವಾಹ ಮಾಡಿಕೊಡುವ ಅಮಾನವೀಯ ಘಟನೆಗಳೂ ನಡೆಯುತ್ತಿವೆ. ನಿರಾಶ್ರಿತರ ಶಾಲೆಗಳಲ್ಲಿ ಇಂತಹ ದೌರ್ಜನ್ಯಗಳು ಬೆಳಕಿಗೆ ಬಂದ ಮರುದಿನವೇ ಅಲ್ಲಿ ಮದುವೆಗಳು ನಡೆಯುವುದನ್ನು ಕಾಣಬಹುದು ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮುಚ್ಚಿಹೋಗುತ್ತಿರುವ ನ್ಯಾಯದ ದಾರಿಗಳು

UNFPA ವರದಿಯ ಪ್ರಕಾರ, ಗಾಜಾದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಕರಣಗಳೂ ಹೆಚ್ಚುತ್ತಿವೆ. ಆದರೆ ಸಾಮಾಜಿಕ ಭಯ, ಪ್ರತೀಕಾರದ ಆತಂಕ ಮತ್ತು ಸರಿಯಾದ ಸೌಲಭ್ಯಗಳಿಲ್ಲದ ಕಾರಣ ಶೇಕಡಾ ನೂರರಷ್ಟು ಪ್ರಕರಣಗಳು ಹೊರಬರುತ್ತಿಲ್ಲ. 12 ರಿಂದ 17 ವರ್ಷದ ಬಾಲಕಿಯರು ಈ ದೌರ್ಜನ್ಯಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ. ದಶಕಗಳ ಸಂಘರ್ಷದಿಂದ ಅಲ್ಲಿನ ಸಾಮಾಜಿಕ ವ್ಯವಸ್ಥೆ ಸಂಪೂರ್ಣವಾಗಿ ಛಿದ್ರಗೊಂಡಿದೆ. ಅಲ್ಲಿ ಯಾವುದೇ ವ್ಯವಸ್ಥೆ ಉಳಿದಿಲ್ಲ ಎಂದು ಪ್ಯಾಲೆಸ್ಟೈನ್‌ನ UNFPA ಪ್ರತಿನಿಧಿ ನೆಸ್ಟರ್ ಓವೊಮುಹಂಗಿ ಆತಂಕ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net