

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ವಿರುದ್ಧ ದಾಖಲಿಸಿರುವ ಶಾಸಕ ಭರತ್ ಶೆಟ್ಟಿ ವಿರುದ್ಧದ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಹಾಗೂ ದೂರುದಾರರಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.
ಎಫ್ಐಆರ್ ರದ್ದುಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ಪ್ರತಿಭಟನೆಯ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ದೂರು ದಾಖಲಾಗಿದೆ. ಅರ್ಜಿದಾರರು ಎಲ್ಲಿಯೂ ಜಾತಿ-ಧರ್ಮ, ವರ್ಣ ವಿಷಯ ಉಲ್ಲೇಖಿಸಿ ಅವಹೇಳನ ಮಾಡಿಲ್ಲ. ಬದಲಿಗೆ ರಾಜಕೀಯ ನೆಲೆಯಲ್ಲಿ ಒಂದೆರಡು ಮಾತುಗಳನ್ನಾಡಿದ್ದಾರೆ ಅಷ್ಟೇ. ಇದೇ ರೀತಿಯ ಹೇಳಿಕೆಯನ್ನು ರಾಹುಲ್ ಗಾಂಧಿ ಅವರು ಸದನದಲ್ಲಿ ಹೇಳಿದ್ದು ಅರ್ಜಿದಾರರು ರಸ್ತೆಯಲ್ಲಿ ಪ್ರತಿಭಟನೆ ವೇಳೆ ಹೇಳಿದ್ದಾರೆ. ಹಾಗಾಗಿ ಇದರಲ್ಲಿ ಅಂತಹ ಅಪರಾಧ ಏನಿಲ್ಲ ಎಂದು ವಾದ ಮಂಡಿಸಿದ್ದರು.
ಇದನ್ನು ದಾಖಲಿಸಿಕೊಂಡ ಪೀಠ, ಈ ರೀತಿಯ ಹೇಳಿಕೆಗಳನ್ನು ನೀಡದಂತೆ ನಿಮ್ಮ ಅರ್ಜಿದಾರರಿಗೆ ತಿಳಿಸಿ ಎಂದು ಸೂಚನೆ ನೀಡಿ ವಿಚಾರಣೆಯನ್ನು 4 ವಾರಗಳ ಕಾಲ ಮುಂದೂಡಿದೆ.
ನಾಲಿಗೆ ಕುಲವ ಅರುಹಿತು
ವಿಚಾರಣೆ ವೇಳೆ ನ್ಯಾಯಪೀಠ ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಧರ್ಮದ ಬಗ್ಗೆ ಮಾತನಾಡುವುದು ಮಾತ್ರ ಆರೋಪವಲ್ಲ. ನಿಮ್ಮ ಅರ್ಜಿದಾರರಿಗೆ ಈ ರೀತಿಯ ಹೇಳಿಕೆ ನೀಡದಂತೆ ತಿಳಿಸಬೇಕು. ತುಂಬಿದ ಸಭೆ ಯಲ್ಲಿ ಮನಬಂದತೆ ಈ ರೀತಿ ಮಾತನಾಡುವುದನ್ನು ಮಕ್ಕಳು ಕೇಳಿಸಿಕೊಂಡರೆ ಅವರು ಕೂಡ ಅದೇ ಭಾಷೆ ಬಳಸುತ್ತಾರೆ. ಬಳಿಕ ತಂದೆ-ತಾಯಿ.ಗುರು ಹಿರಿಯ ಜತೆಗೆ ಅದೇ ಭಾಷೆ ಬಳಿಸಿ ಮಾತಿಗಿಳಿದು ಬಿಡುತ್ತಾರೆ. ಇದರಿಂದ ಸಮಾಜ ಹದಗೇಡುತ್ತದೆ. ಇದಾಗಬಾರದು. ಪ್ರತಿಯೊಬ್ಬರು ಸುಂದರವಾದ ಭಾಷೆ ಬಳಸಿ ಪ್ರೀತಿಯಿಂದ ವ್ಯವಹರಿಸಬೇಕು. ಭಾಷೆ ಹರಿತವಾಗಿರಲಿ. ಆದರೆ, ಈ ರೀತಿ ಶಬ್ಧ ಬಳಕೆ ಸಲ್ಲ. ಕನಕದಾಸರು ಹೇಳಿರುವಂತೆ ನಾಲಿಗೆ ಕುಲವ ಅರುಹಿತು ಇದನ್ನು ಪ್ರತಿಬಾರಿ ಮಾತನಾಡುವಾಗ ನೆನಪಿನಲ್ಲಿಡಬೇಕಾದದ್ದು ಮುಖ್ಯ ಎಂದು ಕಿವಿಮಾತು ಹೇಳಿದೆ.