

ಶಿವಮೊಗ್ಗ: ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ಉಂಟಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಇನ್ನೊಂದು ವಾರದೊಳಗೆ ವ್ಯವಸ್ಥೆ ಸರಿಪಡಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಎಚ್ಚರಿಸಿದರು.
ನಗರದ ಸರ್ಕಾರಿ ಬಾಲಕರ ಬಾಲಮಂದಿರ, ಸಮಾಜ ಕಲ್ಯಾಣ ಇಲಾಖೆ ಎಸ್‌ಸಿ, ಎಸ್‌ಟಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ಉಂಟಾಗಿದೆ. ಸರಿಪಡಿಸಿಕೊಳ್ಳಲು ಅವಕಾಶ ನೀಡಿದ್ದು ವ್ಯವಸ್ಥೆ ಸರಿಯಾಗದಿದ್ದರೆ ಕ್ರಮ ವಹಿಸುವುದಾಗಿ ತಿಳಿಸಿದರು.
ಬಾಲಕಿಯರ ಬಾಲಮಂದಿರದ ಅಡುಗೆ ಮನೆಗೆ ತೆರಳಿ ಮೇಲ್ಛಾವಣೆ ಹಾಗೂ ಆಹಾರದ ಸುರಕ್ಷೆ ಬಗ್ಗೆ ತಪಾಸಣೆ ಮಾಡಿದರು. ಕೈ ತೊಳೆಯುವ ಸ್ಥಳ, ವಾಟರ್ ಫಿಲ್ಟರ್, ಮಕ್ಕಳು ಮಲಗುವ ಕೊಠಡಿ ವೀಕ್ಷಿಸಿ ಹಾಳಾಗಿರುವ ಹಾಸಿಗೆ ಹಾಗೂ ಮಂಚಗಳನ್ನು ಬದಲಾಯಿಸಬೇಕು. ಹಾಳಾದ ಮಂಚಗಳನ್ನು ದುರಸ್ತಿಪಡಿಸುವಂತೆ ಸೂಚಿಸಿದರು.
ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ, ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸ್ಟೆಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಾಲ ಮಂದಿರದ ಆವರಣದಲ್ಲಿ ಹಂದಿಗಳ ಹಾವಳಿ ತಪ್ಪಿಸಬೇಕು. ಶೌಚಗೃಹದ ಟೈಲ್ಸ್‌ಗಳನ್ನು ಬದಲಿಸಬೇಕು. ಅನುದಾನದ ಅವಶ್ಯಕತೆ ಇದ್ದರೆ ಕೇಳಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಅವರಿಗೆ ತಿಳಿಸಿದರು.
ಲೋಕಾಯುಕ್ತ ಜಿಲ್ಲಾ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ, ಜೆ.ವಿ.ವಿಜಯಾನಂದ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಹಿರಿಯ ನ್ಯಾಯಾಧೀಶ ಎಂ.ಎಸ್.ಸಂತೋಷ್, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಮಿಥುನ್‌ಕುಮಾರ್, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಹಾಜರಿದ್ದರು.