ಗಾಂಧಿ ಪಾರ್ಕ್ ಅವ್ಯವಸ್ಥೆಗೆ ಉಪ ಲೋಕಾಯುಕ್ತ ಗರಂ

Gandhi Park visit Deputy Lokayukta
ಶಿವಮೊಗ್ಗ ಗಾಂಧಿಪಾರ್ಕ್‌ನಲ್ಲಿ ಅವ್ಯವಸ್ಥೆಯನ್ನು ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಪರಿಶೀಲಿಸಿದರು. ಗುರುದತ್ತ ಹೆಗಡೆ, ಎಂ.ಎಚ್.ಮಂಜುನಾಥ ಚೌಧರಿ, ಕವಿತಾ ಯೋಗಪ್ಪನವರ್, ಭರತ್ ಇದ್ದರು.
Published on

ಶಿವಮೊಗ್ಗ: ಇದೇನ್ರಿ ಉದ್ಯಾನನಾ? ಇಷ್ಟೊಂದು ಅವ್ಯವಸ್ಥೆಯಿಂದ ಕೂಡಿರುವ ಇನ್ನೊಂದು ಉದ್ಯಾನವನ್ನು ಇಡೀ ರಾಜ್ಯದಲ್ಲಿ ಎಲ್ಲಿಯೂ ನೋಡಿಲ್ಲ. ಅಧಿಕಾರಿಗಳ ನಿರ್ಲಕ್ಷೃಧೋರಣೆ ಕಣ್ಣೆದುರಿಗಿದೆ. ನಗರದ ಹೃದಯಭಾಗದಲ್ಲಿರುವ ಗಾಂಧಿ ಪಾರ್ಕ್ ಹೀನಾಯ ಸ್ಥಿತಿಯಲ್ಲಿದೆ. ಮುಂದಿನ 20 ದಿನದಲ್ಲಿ ಪಾರ್ಕ್‌ನಲ್ಲಿ ಕುಡಿಯುವ ನೀರು, ಶೌಚಗೃಹ ಸ್ವಚ್ಛತೆ ಮತ್ತು ಗಿಡಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಆಯುಕ್ತರು, ಇಂಜಿನಿಯರ್‌ಗಳನ್ನೇ ಪಾರ್ಟಿ ಮಾಡಿ ಕೇಸ್ ದಾಖಲಿಸಲಾಗುವುದು.

ಇದು ಉಪ ಲೋಕಾಯುಕ್ತ, ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇಂಜಿನಿಯರ್‌ಗಳಿಗೆ ಬುಧವಾರ ನೀಡಿದ ಎಚ್ಚರಿಕೆ. ನಗರದ ಗಾಂಧಿ ಪಾರ್ಕ್‌ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ದಂಗಾದ ಅವರು, ನಿರ್ವಹಣೆಯನ್ನೇ ಮಾಡದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದರು. ವಾಯುವಿಹಾರಿಗಳಿಂದ ಸ್ಥಳದಲ್ಲೇ ಅಹವಾಲು ಸ್ವೀಕರಿಸಿದರು.

ವಿದ್ಯುತ್ ದೀಪಗಳು ಸರಿ ಇಲ್ಲ. ಕಂಬಗಳು ಮುರಿದಿವೆ. ಬೆಳಗ್ಗೆ ಆರು ಗಂಟೆಯಾದರೂ ಗೇಟ್ ತೆರೆಯಲ್ಲ. ಶೌಚಗೃಹ ಸ್ವಚ್ಛಗೊಳಿಸಿಲ್ಲ. ಗಿಡಗಳಿಗೆ ನೀರು ಹಾಕುತ್ತಿಲ್ಲ. ಹತ್ತಾರು ಬಾರಿ ದೂರು ಕೊಟ್ಟರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ದೂರುಗಳ ಸುರಿಮಳೆಗೈದರು.

ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ಫಣೀಂದ್ರ ಅವರು, ನೀರಿನ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ವಿವರಣೆಯೇ ಎಲ್ಲ ಸಮಸ್ಯೆಗೂ ಪರಿಹಾರವಲ್ಲ. 15 ದಿನದ ಬಳಿಕ ನಮ್ಮ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲಿಸುವರು. ಅಷ್ಟರೊಳಗೆ ಎಲ್ಲವೂ ಸರಿಯಾಗಬೇಕು ಎಂದು ಸೂಚಿಸಿದರು.

ಲೋಕಾಯುಕ್ತ ಜಿಲ್ಲಾ ನ್ಯಾಯಾಧೀಶರಾದ ನ್ಯಾ. ಎನ್.ಆರ್.ಲೋಕಪ್ಪ , ಜೆ.ವಿ.ವಿಜಯಾನಂದ್, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್‌ಪಿ ಜಿ.ಕೆ.ಮಿಥುನಕುಮಾರ್, ಲೋಕಾಯುಕ್ತ ಎಸ್‌ಪಿ ಎಂ.ಎಚ್.ಮಂಜುನಾಥ ಚೌಧರಿ ಇತರರಿದ್ದರು.

ನವುಲೆ ಕೆರೆ ನಿರ್ವಹಣೆ ಪಾಲಿಕೆಗೆ

ನವುಲೆ ಕೆರೆಯನ್ನು ನೋಡಿದ ನ್ಯಾ. ಕೆ.ಎನ್.ಫಣೀಂದ್ರ ಅವರು ಇದನ್ನು ಯಾರಾದರೂ ಕೆರೆ ಅಂತಾರೇನ್ರಿ ಎಂದು ಪ್ರಶ್ನಿಸಿದರು. ಕೆರೆ ಯಾರ ವ್ಯಾಪ್ತಿಗೆ ಬರುತ್ತದೆ? ನಿರ್ವಹಣೆ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಕೆರೆ ಮುಚ್ಚಿಹೋಗುವ ಸ್ಥಿತಿಯಲ್ಲಿದೆ. ಸಂಬಂಧಿಸಿದ ಅಧಿಕಾರಿಗಳು ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಡಿಸಿ ಗುರುದತ್ತ ಹೆಗಡೆ ಮಾತನಾಡಿ, ಕೆರೆ ಅಬ್ಬಲಗೆರೆ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಆದರೆ ಗ್ರಾಪಂನಿಂದ ಕೆರೆ ನಿರ್ವಹಣೆ ಅಸಾಧ್ಯ. ಜಿಪಂಗೂ ಬರುವುದಿಲ್ಲ. ಹಾಗಾಗಿ ನಿರ್ವಹಣೆಗಾಗಿ ಶೀಘ್ರವೇ ಪಾಲಿಕೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net