

ಎನ್.ಆರ್.ಪುರ: ರಕ್ತಹೀನತೆ ತಡೆದು ಅಪೌಷ್ಟಿಕತೆ ನಿಯಂತ್ರಿಸೋಣ ಎಂದು ಮುತ್ತಿನಕೊಪ್ಪ ಗ್ರಾಪಂ ಸದಸ್ಯ ಮಹಮ್ಮದ್ ಫಯಾಜ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯಿಂದ ಮುತ್ತಿನಕೊಪ್ಪ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರಲ್ಲಿ ರಕ್ತಹೀನತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರ ಮೂಲಕ ರಕ್ತಹೀನತೆ ತಡೆಗಟ್ಟಬಹುದು ಎಂದರು.
ಸಿಡಿಪಿಒ ಕಚೆೇರಿ ಮೇಲ್ವಿಚಾರಕಿ ಕಾವ್ಯಾ ಮಾತನಾಡಿ, ಸೆಪ್ಟೆಂಬರ್ ಪೋಷಣ್ ಮಾಸವಾಗಿ ಆಚರಿಸಲಾಗುತ್ತಿದೆ. ಮೊದಲ ವಾರದಲ್ಲಿ ರಕ್ತಹೀನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮಗುವಿನ ಮೊದಲ ಸಾವಿರ ದಿನ, ರಕ್ತ ಹೀನತೆ, ಅಪೌಷ್ಟಿಕತೆ ಮತ್ತು ಕೈ ತೊಳೆಯುವುದು ಎಂಬ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಾಧಿಕಾರಿ ಪಿ.ಪಿ.ಬೇಬಿ ಮಾಹಿತಿ ನೀಡಿ, ಸಾರ್ವಜನಿಕರಲ್ಲಿ ಪೌಷ್ಟಿಕ ಆಹಾರದ ಮಹತ್ವ ತಿಳಿಸುವ ಕಾರ್ಯಕ್ರಮ ಇದಾಗಿದೆ. ಭಾರತದಲ್ಲಿ ರಕ್ತಹೀನತೆ ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದೆ ಇರುವುದು ಅಪೌಷ್ಟಿಕತೆಗೆ ಮೂಲ ಕಾರಣ. ದೇಹದಲ್ಲಿ ಕೆಂಪು ರಕ್ತ ಕಣದ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆಯಿಂದ ಆಯಾಸ, ನಿಶಕ್ತಿ, ತಲೆ ತಿರುಗುವಿಕೆ, ಅತಿ ನಿದ್ರಾವಸ್ಥೆ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಮಾಂಸ, ಮೀನು, ಸೊಪ್ಪು, ತರಕಾರಿ, ಶೇಂಗಾ, ಬೆಲ್ಲ ಹೆಚ್ಚು ಸೇವಿಸಬೇಕು. ಬೇರೆ ಬೇರೆ ವಯೋಮಾನದವರಿಗೆ ಆರೋಗ್ಯ ಇಲಾಖೆಯಿಂದ ನೀಡುವ ಕಬ್ಬಿಣಾಂಶದ ಸಿರಪ್ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಪುಷ್ಪಾವತಿ, ಜಯಚಂದ್ರ, ಲಿಸ್ಸಿ, ಶಾಲೆ ಮುಖ್ಯಶಿಕ್ಷಕಿ ಗೀತಾ, ಆರೋಗ್ಯ ಇಲಾಖೆಯ ಅಂಕಿತಾ, ಆಶಾ ಕಾರ್ಯಕರ್ತೆಯರಾದ ಸುಜಿ ಆಯೇಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಷ್ಪಾವತಿ, ಫರ್ಜಾನಾ, ಪವಿತ್ರಾ ಇದ್ದರು.