ದಟ್ಟ ಮಂಜು, ಕೊರೆವ ಚಳಿ ಶುರು

24 HANUR 2
ಹನೂರು ತಾಲೂಕಿನಲ್ಲಿ ಮಂಗಲ ಗ್ರಾಮದಲ್ಲಿ ದಟ್ಟವಾದ ಮಂಜು ಆವರಿಸಿದಾಗ ರಸ್ತೆ ಕಂಡದ್ದು ಹೀಗೆ.
Published on

ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ದಟ್ಟವಾದ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದ್ದ ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದರೆ, ಜನರು ಕೊರೆವ ಚಳಿಗೆ ನಡುಗಿದರು.

ತಾಲೂಕಿನಾದ್ಯಂತ ಬೆಳಗ್ಗೆ 6 ರಿಂದ 8ರವರೆಗೆ ವಿಪರೀತ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ರಸ್ತೆ, ಮನೆಗಳು ಕಾಣದಂತಾಗಿತ್ತು. ನೋಡುಗರಿಗೆ ಆಕಾಶ ಹಾಗೂ ಭೂಮಿ ಒಂದೇ ಎಂಬಂತೆ ಭಾಸವಾಯಿತು. ಇದರಿಂದ ವಾಹನಗಳು ಹೆಡ್‌ಲೈಟ್ ಹಾಕಿಕೊಂಡು ನಿಧಾನಗತಿಯಲ್ಲಿ ಸಂಚರಿಸಿದವು. ಜನರು ಚಳಿಯಿಂದ ಸ್ವೆಟರ್ ಹಾಗೂ ಬೆಚ್ಚನೆಯ ಉಡುಪನ್ನು ಧರಿಸುವಂತಾಯಿತು. ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು ಮಂಜಿನ ನಡುವೆಯೇ ತೆರಳಿದರು.

ಮನೆಮನೆಗೆ ಹಾಲು ಹಾಗೂ ಪತ್ರಿಕೆ ತಲುಪಿಸುವ ಹುಡುಗರು ಕಾರ್ಯ ವಿಳಂಬವಾಗಿತ್ತು. ಇನ್ನು ಮ.ಬೆಟ್ಟದಲ್ಲಿ ಜರುಗುವ ದೀಪೋತ್ಸವಕ್ಕೆ ತೆರಳುವ ಕಾಲ್ನಡಿಗೆ ಭಕ್ತರು ಉಘೇ ಮಾದಪ್ಪ ಉಘೇ ಘೋಷಣೆಯನ್ನು ಕೂಗುತ್ತಾ ಸಾಗಿದರು. ಸೂರ್ಯ ಕೊಂಚ ಉದಯಿಸಿ ಕಿರಣಗಳನ್ನು ಹೊರಸೂಸಿದ ಬಳಿಕ ವಾತಾವರಣ ಸ್ವಲ್ಪ ತಿಳಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net