

ನವದೆಹಲಿ: ವಿಶ್ವಾದ್ಯಂತ ಹಬ್ಬಿರುವ ಕೋವಿಡ್-19 ಪಿಡುಗಿನಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮದುವೆ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಕೆಲವು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದರೆ, ಇನ್ನು ಹಲವು ಜೋಡಿಗಳು ಕೋವಿಡ್-19 ಪರಿಸ್ಥಿತಿ ಸುಧಾರಿಸುವ ಸಮಯಕ್ಕಾಗಿ ಕಾಯುತ್ತಿವೆ.
ಆದರೆ, ಈ ದೇಶದ ಪ್ರಧಾನಿಯೊಬ್ಬರು ದೇಶದ ಹಿತದೃಷ್ಟಿಯಿಂದ ಮೂರನೇ ಬಾರಿಗೆ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಹೌದು. ಕೋವಿಡ್-19 ಪರಿಸ್ಥಿತಿ ನಿಯಂತ್ರಿಸುವುದು ಸೇರಿ ನಾನಾ ಕಾರಣಗಳಿಗಾಗಿ ಡೆನ್ಮಾರ್ಕ್ನ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸೆನ್ ಈ ಹಿಂದೆ ನಿಗದಿಯಾಗಿದ್ದ ತಮ್ಮ ಮದುವೆಯನ್ನು ಎರಡು ಬಾರಿ ಮುಂದೂಡಿದ್ದರು. ಇದೀಗ ಅವರು ಜುಲೈ 17 ಮತ್ತು 18ರಂದು ಬ್ರುಸೆಲ್ಸ್ನಲ್ಲಿ ಯುರೋಪಿಯನ್ ಕೌನ್ಸಿಲ್ ಸಭೆ ಆಯೋಜನೆಗೊಂಡಿದೆ. ಕೋವಿಡ್-19 ನಿಯಂತ್ರಣದ ಜತೆಗೆ ಅದರಿಂದಾಗಿ ಆರ್ಥಿಕತೆ ಮೇಲೆ ಉಂಟಾಗಿರುವ ದುಷ್ಪರಿಣಾಮದಿಂದ ಪಾರಾಗುವ ಬಗೆ ಕುರಿತು ಈ ಸಭೆಯಲ್ಲಿ ಚರ್ಚೆಗಳಾಗಲಿವೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆಗೆ ಒಳಗಾಗಿರುವ ಮೆಟ್ಟೆ, ಬೋ ಟೆನ್ಬರ್ಗ್ ಜತೆಗಿನ ತಮ್ಮ ವಿವಾಹವನ್ನು ಮತ್ತೊಮ್ಮೆ ಮುಂದೂಡಿದ್ದಾರೆ.
ಈ ವಿಷಯವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಮೆಟ್ಟೆ, ನಾನು ಬೋಗೆ ಯೆಸ್ ಎಂದು ಹೇಳುವ ದಿನಕ್ಕಾಗಿ ಕಾತರಿಸುತ್ತಿದ್ದೇನೆ. ಆದರೆ, ನಾನಾ ಕಾರಣಗಳಿಗಾಗಿ ಮದುವೆ ಮುಂದೂಡಿಕೆಯಾಗುತ್ತಲೇ ಇದೆ. ಈ ಬಾರಿ ನಾವು ಜುಲೈ 17ರಂದು ಒಂದಾಗಲು ನಿರ್ಧರಿಸಿದ್ದೆವು. ಆದರೆ ದುರದೃಷ್ಟವಶಾತ್, ಅಂದೇ ಯುರೋಪಿಯನ್ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲೇ ಬೇಕಾದ ಅನಿವಾರ್ಯತೆ ಇರುವುದರಿಂದ, ಮದುವೆಯನ್ನು ಕೂಡ ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಬೋ ತುಂಬಾ ತಾಳ್ಮೆಯ ವ್ಯಕ್ತಿಯಾಗಿರುವುದರಿಂದ, ನಮ್ಮಿಬ್ಬರ ಮದುವೆಗಾಗಿ ಇನ್ನಷ್ಟು ಕಾಲ ಕಾಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.