ಅರ್ಹ ವಿದ್ಯಾರ್ಥಿನಿಗೆ ಎಂಬಿಬಿಎಸ್ ಸೀಟು ನಿರಾಕರಣೆ : 15 ಲಕ್ಷ ಪರಿಹಾರ ಕೊಡಲು ಖಾಸಗಿ ಕಾಲೇಜಿಗೆ ಹೈಕೋರ್ಟ್ ಆದೇಶ

highcourt
Published on

 ಬೆಂಗಳೂರು:  ವೈದ್ಯಕೀಯ ಪದವಿ ಹೊಂದಲು ಬೇಕಿರುವ ಎಲ್ಲ ಅರ್ಹತೆ ಹೊಂದಿದ್ದ ವಿದ್ಯಾರ್ಥಿನಿಗೆ ಎಂಬಿಬಿಎಸ್ ಸೀಟು ನೀಡುವುದಾಗಿ ಭರವಸೆ ನೀಡಿ ತದನಂತರ ನಿರಾಕರಿಸಿದ್ದ ಪರಿಣಾಮ 15 ಲಕ್ಷ ರೂ.ಗಳ ಪರಿಹಾರ ಪಾವತಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಗೆ ಹೈಕೋರ್ಟ್ ಸೂಚಿಸಿದೆ.

ತುಮಕೂರಿನ ಸಂಜನಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನುಶಿವರಾಮ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಪ್ರಕರಣದಲ್ಲಿ ಅರ್ಜಿದಾರರು ಎಂಬಿಬಿಎಸ್ ಪದವಿ ಓದುವ ಆಕಾಂಕ್ಷಿಯಾಗಿದ್ದು ಎಲ್ಲ ಅರ್ಹತೆ ಹೊಂದಿದ್ದರು. ಪ್ರತಿವಾದಿ ವಿವಿ ವಿದ್ಯಾರ್ಥಿನಿ ಸೀಟು ನೀಡುವುದಾಗಿ ಹೇಳಿತ್ತು. ಬಳಿಕ ಅವರಿಗಿಂತಲೂ ಕಡಿಮೆ ರ‌್ಯಾಂಕ್ ಪಡೆದಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪೀಠದ ಮುಂದೆ ವಿವರಿಸಿದರು.

ಮುಂದುವರಿದು, ಅರ್ಜಿದಾರರು ತಮಗೆ ಆದ ಅನ್ಯಾಯವನ್ನು ವಿವಿ ಕುಲಪತಿಯ ಬಳಿ ಹೇಳಿಕೊಂಡಾಗ ಅವರು 2018-19ನೇ ಶೈಕ್ಷಣಿಕ ಸಾಲಿನಲ್ಲಿ ಉಚಿತ ಸೀಟು ನೀಡುವುದಾಗಿ ಭರವಸೆ ಪತ್ರವನ್ನು ನೀಡಿದ್ದರು. ಆದರೆ, ಅದನ್ನು ಈಡೇರಿಸಿಲ್ಲ. ಇದರಿಂದ ಬೇರೆ ದಾರಿಯಿಲ್ಲದ ಪರಿಣಾಮ ಮತ್ತೆ 2018ರಲ್ಲಿ ಕೆಇಎ ಮೂಲಕ ಕೌನ್ಸಿಲಿಂಗ್‌ಗೆ ಹಾಜರಾಗಿ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು ಕಾಲೇಜು ಶುಲ್ಕವಾಗಿ 24.2 ಲಕ್ಷ ರೂ. ಗಳ ಪಾವತಿ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಇದಕ್ಕೆ ವಿವಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ ವಕೀಲರು ಸಂಜನಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಲ್ಲಿ ಸಾಕಷ್ಟು ನೀತಿ ಪ್ರದರ್ಶಿಸಿದ್ದಾರೆ. ಅಲ್ಲದೆ, ಕುಲಪತಿಗಳು ಭರವಸೆ ಪತ್ರ ನೀಡಿದ್ದಾರೆ ಎಂಬ ಸಂಗತಿಯಲ್ಲಿ ಹುರುಳಿಲ್ಲ. ಆ ಪತ್ರ ನಕಲಿಯಾಗಿದೆ. ಬ್ಯಾಂಕ್ ಗ್ಯಾರೆಂಟಿ ನೀಡುವಲ್ಲಿಯೂ ತಡವಾಗಿದ್ದು, ಶುಲ್ಕ ಪಾವತಿ ಮಾಡದೆ ಸೀಟು ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಈ ವಾದ ಬಲವಾಗಿ ತಳ್ಳಿಹಾಕಿದ ನ್ಯಾಯಪೀಠ ಮುಂದಿನ ಸಾಲು ಸೀಟು ನೀಡುವುದಾಗಿ ಕುಲಪತಿಗಳು ನೀಡಿದ್ದಾರೆ ಎಂಬ ಪತ್ರದಲ್ಲಿ ಕುಲಪತಿ, ಪ್ರಾಂಶುಪಾಲರು ಮತ್ತು ಅರ್ಜಿದಾರ ಸಂಜನಾ ಅವರ ಸಹಿಗಳಿವೆ. ಈ ಪತ್ರವನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿದ್ದರೆ ಎಂಬುದರ ಸಂಬಂಧ ದೂರು ದಾಖಲಾಗಿಲ್ಲ. ಜತೆಗೆ, ಅರ್ಜಿದಾರರಾದ ಸಂಜನಾ ಅವರು ನಿಗದಿತ ದಿನಕ್ಕೂ ಮೊದಲೇ ಶುಲ್ಕ ಪಾವತಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಎಲ್ಲ ಅಗತ್ಯತೆಗಳನ್ನು ಪೂರೈಸಿದ್ದಾರೆ. ತಕ್ಷಣ ಬ್ಯಾಂಕ್ ಗ್ಯಾರೆಂಟಿಯನ್ನೂ ನೀಡಿದ್ದಾರೆ. ಹೀಗಾಗಿ 15 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net