8000 ಶಿಕ್ಷಕರಿಗೆ ಹಿಂಬಡ್ತಿ: ಪ್ರಾಥಮಿಕ ಶಿಕ್ಷಕರು ಪ್ರೌಢಶಾಲೆ ಗ್ರೇಡ್-2 ಬಡ್ತಿಗೆ ಅರ್ಹರಲ್ಲ, ಈಗಾಗಲೇ ಕೊಟ್ಟ ಮುಂಬಡ್ತಿ ಹಿಂಪಡೆಯಲು ಆದೇಶ

Front lead
Published on

ಬೆಂಗಳೂರು: ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್​-2 ಹುದ್ದೆಗಳಿಗೆ ಬಡ್ತಿ ಪಡೆಯಲು 1 ರಿಂದ 5ನೇ ತರಗತಿಗೆ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶಿಸಿದೆ. ಇಂಥ ಶಿಕ್ಷಕರಿಗೆ ಈಗಾಗಲೇ ಬಡ್ತಿ ನೀಡಿದ್ದರೆ ಅದನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಹೀಗಾಗಿ ರಾಜ್ಯದಲ್ಲಿ ಈಗಾಗಲೇ ಬಡ್ತಿ ಪಡೆದಿರುವ ಸುಮಾರು 8 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿಯಾಗಲಿದೆ.

2018ರಿಂದ 2021ರವರೆಗೆ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1.30 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮನ್ನು ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್​2 ಹುದ್ದೆಯ ಪದೋನ್ನತಿಗೆ ಪರಿಗಣಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಈ ಪೈಕಿ 7 ರಿಂದ 8 ಸಾವಿರ ಶಿಕ್ಷಕರಿಗೆ ಪದೋನ್ನತಿಯೂ ದೊರೆತಿತ್ತು. ಇದರ ಬೆನ್ನಲ್ಲೇ ಕೆಎಟಿಗೆ ವೊರೆ ಹೋಗಿದ್ದ 6 ರಿಂದ 8ನೇ ತರಗತಿಗಳಿಗೆ ಬೋಧಿಸುವ ನೂರಾರು ಪದವೀಧರ ಶಿಕ್ಷಕರು, ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗೆ ಬಡ್ತಿ ಪಡೆಯಲು 6ರಿಂದ 8ನೇ ತರಗತಿ ಬೋಧಿಸುವ ಪದವೀಧರ ಶಿಕ್ಷಕರು ಮಾತ್ರವೇ ಅರ್ಹರಾಗಿದ್ದು, ತಮ್ಮನ್ನು ಬಡ್ತಿಗೆ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಹಂಗಾಮಿ ಅಧ್ಯಕ್ಷ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ನೇತೃತ್ವದ ಪೀಠ, ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗೆ ಪದೋನ್ನತಿ ಪಡೆಯಲು ಪ್ರಾಥಮಿಕ ಶಾಲಾ ಶಿಕ್ಷಕರು ಅರ್ಹರಲ್ಲ. ಬದಲಿಗೆ, 6ರಿಂದ 8ನೇ ತರಗತಿ ಬೋಧಿಸುವ ಹಿರಿಯ ಪ್ರಾಥಮಿಕ ಶಿಕ್ಷಕರು ಮಾತ್ರ ಅರ್ಹರೆಂದು ಆದೇಶಿಸಿದೆ. ಇದರಿಂದ ರಾಜ್ಯದಲ್ಲಿ 6 ರಿಂದ 8ನೇ ತರಗತಿಗಳಿಗೆ ಬೋಧಿಸುತ್ತಿರುವ 13 ಸಾವಿರ ಶಿಕ್ಷಕರಿಗೆ ಸಿಹಿ ಸುದ್ದಿ ದೊರೆತಂತಾಗಿದೆ.

ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್​ 2 ಹುದ್ದೆಗೆ ಪದೋನ್ನತಿಯನ್ನು 2018ರಿಂದ 21ರವರೆಗೆ ನೀಡುತ್ತಲೇ ಬಂದಿದ್ದಾರೆ. ಕೆಲವು ಶಿಕ್ಷಕರು ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಈ ರೀತಿ ಪದೋನ್ನತಿ ಪಡೆದಿರುವ ಬಗ್ಗೆ ಆರೋಪ ಕೂಡ ಕೇಳಿ ಬಂದಿದೆ. ಇದೀಗ ಕೆಎಟಿ ಆದೇಶ ನೀಡಿರುವುದು ಮತ್ತು ಬಡ್ತಿ ಪಡೆದಿರುವವರಿಗೆ ಹಿಂಬಡ್ತಿ ನೀಡುತ್ತಿರುವುದನ್ನು ಪ್ರಶ್ನಿಸಿ ಇವರು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.

ಕೆಎಟಿ ಆದೇಶದಲ್ಲಿ ಏನಿದೆ?

  • ಒಂದರಿಂದ 5ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಹಿರಿತನದ ಪಟ್ಟಿಯಲ್ಲಿರುವವರಿಗೆ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್- 2 ಹುದ್ದೆಗೆ ಬಡ್ತಿ ನೀಡಲು ಸಾಧ್ಯವಿಲ್ಲ. ಏಕೆಂದರೆ, ಈ ಹುದ್ದೆಗಳು ಪ್ರಾಥಮಿಕ ಶಾಲಾ ಸಹಶಿಕ್ಷಕರ ಶ್ರೇಣಿಯ ನಂತರದ ಶ್ರೇಣಿಯ ಹುದ್ದೆಗಳಲ್ಲ.
  • 1 ರಿಂದ 5ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ನೀಡಿದ್ದಲ್ಲಿ ತಕ್ಷಣ ಅಂಥ ಶಿಕ್ಷಕರಿಗೆ ನೋಟಿಸ್ ನೀಡಿ ಬಡ್ತಿ ಹಿಂಪಡೆಯಬೇಕು.
  • ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್ 2 ಶ್ರೇಣಿಗೆ 6 ರಿಂದ 8ನೇ ತರಗತಿ ಬೋಧಿಸುವ ಪದವೀಧರ ಹಿರಿಯ ಪ್ರಾಥಮಿಕ ಶಿಕ್ಷಕರು ಆರ್ಹರಾಗಿರುತ್ತಾರೆ.
  • 1ರಿಂದ 5ನೇ ತರಗತಿಗಳಿಗೆ ಬೋಧಿಸುವ ಪ್ರಾಥಮಿಕ ಶಿಕ್ಷಕರು ಮತ್ತು 6ರಿಂದ 8ನೇತರಗತಿ ಬೋಧಿಸುವ ಪದವೀಧರ ಶಿಕ್ಷಕರ ಹುದ್ದೆಗಳು ವಿಭಿನ್ನ ಶ್ರೇಣಿಗಳಾಗಿದ್ದು, ಸೇವಾ ಹಿರಿತನದ ಆಧಾರದಲ್ಲಿ ಬೇರೆ ಬೇರೆ ಪಟ್ಟಿ ಮಾಡಬೇಕು. ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಹಿರಿತನವನ್ನು ಪರಿಗಣಿಸಬೇಕು.
  • ಈ ಆದೇಶ ರಾಜ್ಯದ ಎಲ್ಲ ಜಿಲ್ಲೆಗಳ ಪ್ರೌಢಶಾಲಾ ಸಹ ಶಿಕ್ಷಕ ಬಡ್ತಿಗೆ ಅನ್ವಯವಾಗಲಿದೆ.
  • ಅರ್ಜಿದಾರ ಶಿಕ್ಷಕರು ವೃಂದ ಮತ್ತು ನೇಮಕಾತಿ ನಿಯಮಗಳ ಅಡಿಯಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಿದ್ದಲ್ಲಿ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅವರನ್ನು ಸರ್ಕಾರ ಪರಿಗಣಿಸಬೇಕು.

ಕೆಎಟಿ ನೀಡಿರುವ ತೀರ್ಪಿಗೆ ನಾವು ತಲೆಬಾಗಬೇಕಿದೆ. ಆದರೆ, ಇದರಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಧೃತಿಗೆಡುವ ಅವಶ್ಯಕತೆ ಇಲ್ಲ. ಇದರ ವಿರುದ್ಧವಾಗಿ ಹೋರಾಟ ಮಾಡುವುದಕ್ಕೆ ಸಿದ್ಧರಾಗುತ್ತೇವೆ.

| ಯಲ್ಲಪ್ಪಗೌಡ ಅಧ್ಯಕ್ಷ, ರಾಜ್ಯ ಸರ್ಕಾರಿ ಬಡ್ತಿ ಪ್ರೌಢಶಾಲಾ ಶಿಕ್ಷಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net