10 ಲಕ್ಷ ಜನರ ಸೇರಿಸಿ ಬಲ ಪ್ರದರ್ಶನ: ಬಿ.ಕೆ.ಹರಿಪ್ರಸಾದ್

kantaraj report chintana manthana programme
ಚಿಂತನ-ಮಂಥನ ಕಾರ್ಯಕ್ರಮವನ್ನು ಬಿ.ಕೆ.ಹರಿಪ್ರಸಾದ್ ಉದ್ಘಾಟಿಸಿದರು. ತೀ.ನ.ಶ್ರೀನಿವಾಸ್, ಆರ್.ಮೋಹನ್, ಜಿ.ವಿ.ಗಣೇಶಪ್ಪ, ಗೀತಾಂಜಲಿ ದತ್ತಾತ್ರೇಯ, ಉಮಾಪತಿ, ಜಿ. ಪದ್ಮನಾಭ, ಶಶಿಕುಮಾರ್, ಚಂದ್ರಕಾಂತ್, ಪಿ.ಓ.ಶಿವಕುಮಾರ್, ವಿಶ್ವನಾಥ್ ಕಾಶಿ, ಶಿವಾನಂದ, ಮಂಜಪ್ಪ, ಬಿ.ವಿ.ರಮಣಿ ಇದ್ದರು.
Published on

ಶಿವಮೊಗ್ಗ: ಜನಸಂಖ್ಯೆ ಆಧಾರಿತ ಜಾತಿಗಣತಿ ಇದ್ದರೆ ಮಾತ್ರ ಸರ್ಕಾರಗಳ ಸೌಲಭ್ಯಗಳು ಎಲ್ಲರಿಗೂ ಸಿಗಲಿವೆ. ಆ ಕಾರಣಕ್ಕಾಗಿ ಹಿಂದುಳಿದ ವರ್ಗಗಳ ಜನರಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸಲು ಜಿಲ್ಲಾವಾರು ಸಭೆಗಳನ್ನು ಹಮ್ಮಿಕೊಂಡಿದ್ದು ಮುಂದೆ 10 ಲಕ್ಷ ಜನರನ್ನು ಒಂದೆಡೆ ಸೇರಿಸಿ ಕಾಂತರಾಜ್ ವರದಿ ಬಿಡುಗಡೆಗೊಳಿಸುವಂತೆ ಸರ್ಕಾರ ಮೇಲೆ ಒತ್ತಡ ತರಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಶಿವಮೊಗ್ಗ ಜಿಲ್ಲಾ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆಯಿಂದ ಕಾಂತರಾಜ್ ಅವರ ಶಾಶ್ವತ ಹಿಂದುಳಿದ ವರ್ಗ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಚಿಂತನ-ಮಂಥನ ಉದ್ಘಾಟಿಸಿ ಮಾತನಾಡಿ, ಪ್ರವರ್ಗ-1ರಲ್ಲಿ 101 ಜಾತಿಗಳಿವೆ. ಅದರಲ್ಲಿ ನಾಲ್ಕೈದು ಜಾತಿಗಳು ಮಾತ್ರ ಆರ್ಥಿಕವಾಗಿ ಸದೃಢವಾಗಿದ್ದು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ಉಳಿದ 96ರಿಂದ 97 ಜಾತಿಗಳಿಗೆ ಯಾವುದೇ ಸೌಕರ್ಯಗಳು ಸಿಕ್ಕಿಲ್ಲ ಎಂದರು.
ಮೀಸಲಾತಿ ಎಂಬ ಖಜಾನೆ ಕೆಲವರ ಕಪಿಮುಷ್ಠಿಯಲ್ಲಿದೆ. ಅದನ್ನು ಬಿಡಿಸಲು ಜಾತಿಗಣತಿ ಅವಶ್ಯಕವಾಗಿದೆ. ಇಲ್ಲಿ ಮೇಲ್ಜಾತಿ, ಕೆಳಜಾತಿಗಳಿಲ್ಲ. ಎಲ್ಲರೂ ಸಮಾನರು ಎಂಬುದನ್ನು ಸಂವಿಧಾನವೇ ಹೇಳಿದೆ. ಯಾವುದೋ ಒಂದು ಜಾತಿ, ಧರ್ಮದ ವಿರುದ್ಧ ಅಥವಾ ರಾಜಕೀಯ ಉದ್ದೇಶದಿಂದ ಜನಜಾಗೃತಿ ಸಭೆ ನಡೆಸುತ್ತಿಲ್ಲ. ಸ್ವಾತಂತ್ರೃ ನಂತರ ಅವಕಾಶ ವಂಚಿತರಾಗಿರುವವರಿಗೆ ಸೌಲಭ್ಯ, ಸೌಕರ್ಯ ಕಲ್ಪಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್, ಸಾಧುಶೆಟ್ಟಿ ಸಮಾಜದ ಅಧ್ಯಕ್ಷ ಉಮಾಪತಿ, ಬಲಿಜ ಸಮಾಜದ ಜಿ.ಪದ್ಮನಾಭ, ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಶಶಿಕುಮಾರ್ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕ ಆರ್.ಮೋಹನ್, ಪ್ರಮುಖರಾದ ಜಿ.ವಿ.ಗಣೇಶಪ್ಪ, ಗೀತಾಂಜಲಿ ದತ್ತಾತ್ರೇಯ, ಚಂದ್ರಕಾಂತ್, ಪಿ.ಒ.ಶಿವಕುಮಾರ್, ವಿಶ್ವನಾಥ್ ಕಾಶಿ, ಶಿವಾನಂದ, ಮಂಜಪ್ಪ, ಬಿ.ವಿ.ರಮಣಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net