ಸಚಿವ ಸ್ಥಾನದ ಬೇಡಿಕೆ-ಆಸೆ ಸ್ಪೋಟ, ಹೈಕಮಾಂಡ್‌ಗೆ ಸೂಕ್ಷ್ಮ ಸಂದೇಶ ರವಾನೆ, ಇಂಡಿ ಕ್ಷೇತ್ರದ ಮಂತ್ರಿಗಿರಿಯ ಬರ ನೀಗಲಿ ಎಂದ ಶಾಸಕ ಯಶವಂತರಾಯಗೌಡ ಪಾಟೀಲ

YASHAVANTRAYAGOUDA PATIL
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ರಾಜ್ಯದಲ್ಲಿ ಸಂಪುಟ ಪುನಾರಚನೆ ಸದ್ದು ದಿನೇ ದಿನೇ ಜೋರಾಗುತ್ತಿರುವ ಬೆನ್ನಲ್ಲೇ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಸಚಿವ ಸ್ಥಾನದ ಇಂಗಿತ ಹೊರಹಾಕಿದ್ದು ಮಾತ್ರವಲ್ಲ, ಹೈಕಮಾಂಡ್‌ಗೆ ಸೂಕ್ಷ್ಮ ಸಂದೇಶ ಕೂಡ ರವಾನಿಸಿದ್ದಾರೆ.

ವಿಧಾನ ಸಭೆ ಚುನಾವಣೆ ಪೂರ್ವದಲ್ಲಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು. ಜಿಲ್ಲೆಯ ಅಗ್ರಗಣ್ಯ ನಾಯಕರೂ ಮಾತು ಕೊಟ್ಟಿದ್ದು, ಆ ಪ್ರಕಾರ ನಡೆದುಕೊಳ್ಳುವರೆಂಬ ವಿಶ್ವಾಸವಿದೆ. ಹಾಗೊಂದು ವೇಳೆ ಸಚಿವ ಸ್ಥಾನ ಸಿಗದೇ ಇದ್ದ ಪಕ್ಷದಲ್ಲಿ ಮುಂದಿನ ತೀರ್ಮಾನ ಯೋಚಿಸಿ ಕೈಗೊಳ್ಳಲಾಗುವುದು. ಹಾಗಂತ ನಾನೆಂದೂ ಕಾಂಗ್ರೆಸ್‌ಗೆ ದ್ರೋಹ ಬಗೆಯುವುದಿಲ್ಲ. ನಾನೊಬ್ಬ 24 ಕ್ಯಾರೆಟ್ ಕಾಂಗ್ರೆಸ್ಸಿಗ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.

ನಾನು ಸಚಿವ ಸ್ಥಾನದ ಮೇಲೆ ಆಸೆ ಇಟ್ಟು ರಾಜಕಾರಣ ಮಾಡಿಲ್ಲ, ಇಂಡಿ ಮತಕ್ಷೇತ್ರಕ್ಕೆ ಈವರೆಗೆ ಸಚಿವ ಸ್ಥಾನ ದೊರಕಿಲ್ಲ, ದಿ.ಆರ್.ಆರ್. ಕಲ್ಲೂರ ಅವರು ಅನೇಕ ಬಾರಿ ಶಾಸಕರಾದರೂ ಸಹ ಅವರಿಗೆ ಸಚಿವ ಸ್ಥಾನ ದೊರಕಲಿಲ್ಲ, ಲ್ಯಾಂಡ್ ಆರ್ಮಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಅಲಂಕರಿಸಿದ್ದರು. ಈ ಕೊರತೆ ನೀಗಬೇಕೆಂಬುದು ಬಹುದಿನದ ಆಸೆ ಮತ್ತು ಬೇಡಿಕೆ. ಕಳೆದ ಬಾರಿಯೇ ನನಗೆ ಸಚಿವ ಸ್ಥಾನ ಹೊಸ್ತಿಲಲ್ಲಿತ್ತು, ಆದರೆ ಅದನ್ನು ತ್ಯಾಗ ಮಾಡಬೇಕಾಯಿತು. ಈ ಬಾರಿ ಸಚಿವ ಸ್ಥಾನ ದೊರಕಿಸುವ ನಿಟ್ಟಿನಲ್ಲಿ ಅಗ್ರಗಣ್ಯ ನಾಯಕರಿಂದ ಭರವಸೆ ಇದೆ, ಅವರು ಮಾತು ಸಹ ನೀಡಿದ್ದಾರೆ, ಹೀಗಾಗಿ ಮಾತು ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ ಎಂದರು.

ಜಿಲ್ಲೆಯ ಶಾಸಕರೊಬ್ಬರು ಈಗಾಗಲೇ ಎರಡು ಬಾರಿ ಸಚಿವರಾಗಿದ್ದಾರೆ, ದಿ.ಬಂಗಾರಪ್ಪ ಸಚಿವ ಸಂಪುಟದಲ್ಲಿ, ನಂತರ ವೀರಪ್ಪ ಮೋಯಿಲಿ ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದು, ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ. ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದವರಿಗೂ ಸಚಿವ ಸ್ಥಾನ ಒಲಿದಿದೆ, ವಲಸಿಗರಿಗೂ ಒಲಿದಿದೆ, ಆದರೆ ನಾನು ಶುದ್ಧ ಕಾಂಗ್ರೆಸ್ಸಿಗ, 22 ಕ್ಯಾರೇಟ್ ಅಲ್ಲ 24 ಕ್ಯಾರೇಟ್ ಶುದ್ಧ ಕಾಂಗ್ರೆಸ್ಸಿಗ, ನಾನು ಬೇರೆ ಪಕ್ಷದಿಂದ ಬಂದಿಲ್ಲ, ಇಲ್ಲಿಯೇ ಇರುವೆ ಒಟ್ಟು 40 ವರ್ಷಗಳ ಕಾಲ ನನ್ನ ಮನೆತನ ಶುದ್ಧ ರಾಜಕಾರಣದಲ್ಲಿದೆ ಎಂದರು.

ಇತ್ತೀಚೆಗೆ ಮುಖ್ಯಮಂತ್ರಿಗಳು ಇಂಡಿ ಕ್ಷೇತ್ರಕ್ಕೆ ಬಂದಾಗ ಜನತೆ ಸಚಿವ ಸ್ಥಾನದ ಬೇಡಿಕೆ ಮಂಡಿಸುವ ಆಶಯ ವ್ಯಕ್ತಪಡಿಸಿದಾಗ ನಾನೇ ಅವರನ್ನು ಕೈ ಮುಗಿದು ತಡೆದಿರುವೆ, ನಾನು ಪ್ರಬುದ್ಧ ರಾಜಕಾರಣಿ, ಹೀಗಾಗಿ ಯಾವ ಗೊಂದಲ ಉಂಟಾಗದಂತೆ ನೋಡಿಕೊಂಡಿರುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net