

ಶಿವಮೊಗ್ಗ: ಆಟೋ ಚಾಲಕರು ತಮಗೆ ವಿಧಿಸಿರುವ ಮಿತಿ ಉಲ್ಲಂಘಿಸಿ ಶಿವಮೊಗ್ಗ ವಿಮಾನ ನಿಲ್ದಾಣದಿಂದಲೂ ಬಾಡಿಗೆ ಸೇವೆ ಒದಗಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಸೋಗಾನೆ ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಸೋಮವಾರ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿರುವ ಆಟೋ ಚಾಲಕರು 10 ಕಿ.ಮೀ ವ್ಯಾಪ್ತಿಯಲ್ಲಿ ಬಾಡಿಗೆ ಸೇವೆ ಒದಗಿಸಲು ಕಾನೂನಾತ್ಮಕವಾಗಿ ಅವಕಾಶವಿದೆ. ಆದರೆ ಬಸ್ ನಿಲ್ದಾಣದಿಂದ 14 ಕಿ.ಮೀ ದೂರವಿರುವ ವಿಮಾನ ನಿಲ್ದಾಣದಿಂದಲೂ ಇವರು ಸೇವೆ ಒದಗಿಸುತ್ತಿದ್ದಾರೆ. ಇದರಿಂದ ಟ್ಯಾಕ್ಸಿ ಚಾಲಕರು ಹಾಗೂ ಆಟೋ ಚಾಲಕರ ನಡುವೆ ನಿತ್ಯ ವಾಗ್ವಾದಗಳು ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸೋಗಾನೆ ವಿಮಾನ ನಿಲ್ದಾಣ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದಲ್ಲಿ 60 ಸದಸ್ಯರಿದ್ದಾರೆ. ಎರಡು ವರ್ಷಗಳಿಂದ ಯಾವುದೇ ಕಾನೂನು ಉಲ್ಲಂಘನೆಯಾಗದೆ ಬಾಡಿಗೆ ಸೇವೆ ಒದಗಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರು ವಿಮಾನ ನಿಲ್ದಾಣದ ಒಳಗಡೆಯೇ ಬಂದು ಕಾನೂನುಬಾಹಿರವಾಗಿ ಬಾಡಿಗೆ ನಡೆಸುತ್ತಿದ್ದಾರೆ. ಇಲ್ಲಿ ಜಗಳ ಆಗುವುದರಿಂದ ವಿಮಾನ ನಿಲ್ದಾಣದಲ್ಲಿ ವಾತಾವರಣ ಹದಗೆಡುತ್ತಿದೆ ಎಂದು ದೂರಿದರು.
ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘದ ಪ್ರಮುಖರಾದ ಶಿವಕುಮಾರ್, ಹರೀಶ್‌ಕುಮಾರ್, ಭವಾನಿ, ಮಂಜುನಾಥ್, ನರಸಿಂಹಮೂರ್ತಿ, ಸೋಮಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.