

ಶಿವಮೊಗ್ಗ: ಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿಗೆ ಸಂಬಂಧಿಸಿದಂತೆ ಇ-ಆಸ್ತಿ ನಾಗರಿಕರ ಕರಡು ಪ್ರತಿಗಳನ್ನು ನೀಡುವ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪ್ರಮುಖರು ನಗರ ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್ ಅವರನ್ನು ಒತ್ತಾಯಿಸಿದರು.
ಈ ಸಂಬಂಧ ಮನವಿ ನೀಡಲು ಮಂಗಳವಾರ ಪಾಲಿಕೆಗೆ ತೆರಳಿದ್ದ ಒಕ್ಕೂಟದ ಪ್ರಮುಖರಿಗೂ ಆಯುಕ್ತರಿಗೆ ಕೊಂಚ ವಾಗ್ವಾದವೂ ನಡೆಯಿತು. ಕೆಲ ಸಮಯ ಯಾರು? ಏನು ಮಾತನಾಡುತ್ತಿದ್ದಾರೆ? ಎಂಬುದೇ ತಿಳಿಯದ ಸನ್ನಿವೇಶ ಸೃಷ್ಟಿಯಾಗಿತ್ತು. ನಾಗರಿಕರ ಸಮಸ್ಯೆಗೆ ಸ್ಪಂದಿಸದ ಆಯುಕ್ತರು ಎಂದು ಕೆಲವರು ಘೋಷಣೆಗಳನ್ನೂ ಕೂಗಿದರು. ಆಯುಕ್ತರು ಮನವಿ ಸ್ವೀಕರಿಸದೇ ಅಲ್ಲಿಂದ ತೆರಳಿದ್ದು ಒಕ್ಕೂಟದ ಪ್ರಮುಖರ ಆಕ್ರೋಶಕ್ಕೆ ಕಾರಣವಾಯಿತು.
ಇ-ಆಸ್ತಿಗೆ ಸಂಬಂಧಪಟ್ಟಂತೆ ನಾಗರಿಕರಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಉಂಟಾಗಿವೆ. ಜನರು ನಗರ ಪಾಲಿಕೆಗೆ ಪ್ರತಿನಿತ್ಯ ಅಲೆದಾಡುತ್ತಿದ್ದು, ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಧ್ಯವರ್ತಿಗಳು ಹಾಗೂ ಕೆಲವು ಅಧಿಕಾರಿಗಳಿಂದ ಜನರ ಶೋಷಣೆಯಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರದ ಸುತ್ತೋಲೆಯಂತೆ ಮೊದಲು ಕೆಎಂಡಿಎಸ್ ಸಾಫ್ಟ್‌ವೇರ್‌ನಲ್ಲಿ ಇ-ಆಸ್ತಿಯ ಕುರಿತು ಕರಡು ಪ್ರತಿಯನ್ನು ನಾಗರಿಕರಿಗೆ ನೀಡಬೇಕು ಎಂದು ಒಕ್ಕೂಟದ ಪ್ರಮುಖರು ಆಗ್ರಹಿಸಿದರು.
ಕರಡು ಪ್ರತಿ ಒದಗಿಸಿದ ಬಳಿಕ ಸರ್ಕಾರ ನಿಗದಿಪಡಿಸಿರುವ 6 ದಾಖಲೆಗಳನ್ನು ಖಾತೆದಾರರಿಂದ ಪಡೆಯಬೇಕು. ನಂತರ 100 ರೂ. ಶುಲ್ಕ ಪಡೆದು ಇ-ಆಸ್ತಿಗೆ ಪೂರಕವಾದ ನಮೂನೆ 2/3ನ್ನು ಖಾತೆದಾರರಿಗೆ ನೀಡಬೇಕು. ಕೆಎಂಡಿಎಸ್ ಸಾಫ್ಟ್‌ವೇರ್‌ನಲ್ಲಿ ಇ-ಆಸ್ತಿಗೆ ಪೂರಕವಾದ ನಮೂನೆ 2/3ರ ಕರಡು ಪ್ರತಿಯನ್ನು ಪಾಲಿಕೆಯಲ್ಲಿ ಹಾಲಿ ಇರುವ 1.07 ಲಕ್ಷ ಖಾತೆದಾರರಿಗೆ ಪಾಲಿಕೆ ಮೊದಲು ನೀಡಬೇಕು ಎಂದು ಒತ್ತಾಯಿಸಿದರು.
ಫೆ. 25ರಿಂದಲೇ ಇ-ಖಾತೆ ಬಗ್ಗೆ ನಾಗರಿಕರಿಗೆ ಕರಡು ಪ್ರತಿ ನೀಡುವ ಬಗ್ಗೆ ಈ ಹಿಂದೆ ನೀವು ಭರವಸೆ ನೀಡಿದ್ದೀರಿ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮೂರು ವರ್ಷಗಳ ಹಿಂದೆಯೇ ಪಾಲಿಕೆ ನಾಗರಿಕರಿಗೆ ಕರಡು ಪ್ರತಿ ನೀಡಬೇಕಾಗಿತ್ತು. ಪಾಲಿಕೆ ಕಂದಾಯ ಅಧಿಕಾರಿಗಳ ವೈಫಲ್ಯ ತೆರಿಗೆ ಪಾವತಿದಾರರಿಗೆ ದಿನನಿತ್ಯದ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಸಂಚಾಲಕ ಕೆ.ವಿ.ವಸಂತ ಕುಮಾರ್, ಪ್ರಮುಖರಾದ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಜನಾರ್ದನ ಪೈ, ಶಿವಕುಮಾರ್ ಕಸೆಟ್ಟಿ, ನಾರಾಯಣ ಮೂರ್ತಿ, ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ವಿಜಯಕುಮಾರ್, ಸುರೇಶ್ ಮುಂತಾದವರಿದ್ದರು.
ಆಯುಕ್ತರು ಮನವಿ ಸ್ವೀಕರಿಸದೆ ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಒಕ್ಕೂಟದ ಸದಸ್ಯರು ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಆಯುಕ್ತರ ವಿರುದ್ಧ ದೂರು ಸಲ್ಲಿಸಿದರು. ಜಿಲ್ಲಾಧಿಕಾರಿಗಳು ವೇದಿಕೆ ಸದಸ್ಯರನ್ನು ಕಚೇರಿಯೊಳಕ್ಕೆ ಕೂರಿಸಿಕೊಂಡು ಸಮಾಲೋಚನೆ ನಡೆಸಿದರು. ಶೀಘ್ರದಲ್ಲೇ ಎಲ್ಲ ಗೊಂದಲ ನಿವಾರಿಸುವ ಭರವಸೆ ನೀಡಿದರು.