ಕೈಗಾರಿಕೆಗಳ ಸಮಸ್ಯೆ ಪರಿಹರಿಸುವಂತೆ ಒತ್ತಾಯ

dc meeting
ಜಿಲ್ಲಾ ಮಟ್ಟದ ಏಕಗವಾಕ್ಷಿ ಹಾಗೂ ಕೈಗಾರಿಕಾ ಸ್ಪಂದನಾ ಸಭೆಯಲ್ಲಿ ಗುರುದತ್ತ ಹೆಗಡೆ, ಬಿ.ಗೋಪಿನಾಥ್, ಜೋಯ್ಸ ರಾಮಾಚಾರ್, ರಮೇಶ್ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.
Published on

ಶಿವಮೊಗ್ಗ: ಹೊಸ ಕೈಗಾರಿಕೆಗಳು ಜಿಲ್ಲೆಗೆ ಬರುತ್ತಿಲ್ಲ ಎಂಬ ಕೂಗಿನ ನಡುವೆ ಇರುವ ಕೈಗಾರಿಕೆಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಹಾಗೂ ಕೈಗಾರಿಕಾ ಸ್ಪಂದನಾ ಸಭೆಯಲ್ಲಿ ಕೈಗಾರಿಕೋದ್ಯಮಿಗಳು ಕೊರತೆ ಪಟ್ಟಿ ಮಾಡಿದರು.

ಶಿವಮೊಗ್ಗ ಆಟೋ ಕಾಂಪ್ಲೆಕ್ಸ್‌ನಲ್ಲಿರುವ ನಿವೇಶನ ಹಾಗೂ ಕಟ್ಟಡಗಳ ಇ-ಖಾತೆ ಮಾಡಿಸಲು ತೊಂದರೆಯಾಗುತ್ತಿದೆ. 27 ವರ್ಷಗಳ ಹಿಂದೆ ಕೆಐಎಡಿಬಿ ಅಭಿವೃದ್ಧಿಪಡಿಸಿದ ಪ್ರದೇಶವನ್ನು ಕೆಲ ವರ್ಷಗಳ ಹಿಂದೆ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಇ-ಖಾತೆ ಮಾಡಲು ಪಾಲಿಕೆಯಿಂದ ಅನುಮತಿ ಪತ್ರ ಕೇಳಲಾಗುತ್ತಿದೆ. ದಿಕ್ಕುಗಳಲ್ಲಿ ವ್ಯತ್ಯಾಸವಿದೆ ಎನ್ನುತ್ತಿದ್ದಾರೆ. ಇದಕ್ಕೆ ಪರಿಹಾರ ಒದಗಿಸಿ ಎಂದು ಕೈಗಾರಿಕೋದ್ಯಮಿಗಳು ಒತ್ತಾಯಿಸಿದರು.

ಸಾಗರ ರಸ್ತೆಯ ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ವಸಾಹತು ಪಾಲಿಕೆಗೆ ಹಸ್ತಾಂತರವಾಗಿದೆ. ನಾವು ತೆರಿಗೆ ಪಾವತಿಸುತ್ತಿದ್ದರೂ ವಸಾಹತು ನಿರ್ವಹಣೆ ಸಮರ್ಪಕವಾಗಿಲ್ಲ. ಆಟೋ ಕಾಂಪ್ಲೆಕ್ಸ್ ಘಟಕಗಳಿಗೆ ಪ್ರತ್ಯೇಕ ಯುಜಿಡಿ ಸಂಪರ್ಕ ಒದಗಿಸಬೇಕು. ಮಾಚೇನಹಳ್ಳಿ ಆಟೋ ಕಾಂಪ್ಲೆಕ್ಸ್ ಬಳಿ ಸುಲಭ್ ಶೌಚಗೃಹ ನಿರ್ಮಿಸಬೇಕು. ಕಲ್ಲೂರು-ಮಂಡ್ಲಿ ಪ್ರದೇಶದಲ್ಲಿ ಎಲೆಕ್ಟ್ರಿಕಲ್ ಸಬ್ ಸ್ಟೇಷನ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಸಾಗರ ರಸ್ತೆಯ ಎಪಿಎಂಸಿಯಿಂದ ಆಟೋ ಕಾಂಪ್ಲೆಕ್ಸ್‌ವರೆಗೆ ರಸ್ತೆ ಪಕ್ಕದಲ್ಲಿ ಬಸ್‌ಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಅಪಘಾತ ಹಾಗೂ ಅವಘಡಗಳು ಉಂಟಾಗುವ ಸಂಭವವಿದೆ. ಮಾಚೇನಹಳ್ಳಿ ಮತ್ತಿತರ ಕೈಗಾರಿಕಾ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚಾಗಿವೆ. ಪ್ರದೇಶದ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತದ ಗಮನ ಸೆಳೆದರು.

ಜಿಲ್ಲೆಯ ವಿವಿಧ ಕೈಗಾರಿಕಾ ವಸಾಹತುವಿನಲ್ಲಿ ಖಾಲಿ ಇರುವ ನಿವೇಶನ ಹಾಗೂ ಮಳಿಗೆಗಳನ್ನು ಪಡೆಯಲು ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿ ಲಾಟರಿ ಮೂಲಕ ನಿವೇಶನ ಮತ್ತು ಮಳಿಗೆಗಳನ್ನು ಹಂಚಿಕೆ ಮಾಡಲಾಯಿತು.

ಜಿಪಂ ಸಿಇಒ ಎನ್.ಹೇಮಂತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಜಿಲ್ಲಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜೋಯ್ಸ ರಾಮಾಚಾರ್, ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣಪ್ಪ, ಕರ್ನಾಟಕ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net