

ಪಿರಿಯಾಪಟ್ಟಣ: ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಮೂಲಕ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 17ಹೆಚ್ಚು ಮೊಬೈಲ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಮೇಲ್ಮಟ್ಟದ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಆದರೆ, ಈ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಇಂಟರ್ನೆಟ್, ಸ್ಕಾೃನರ್ ಮತ್ತು ಪ್ರಿಂಟರ್‌ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸಮರ್ಪಕ ಮೂಲ ಸೌಕರ್ಯಗಳಿಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ. ತಾಲೂಕಿನ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳಿಗೆ ಮೊಬೈಲ್, ಲ್ಯಾಪ್‌ಟಾಪ್, ಇಂಟರ್ನೆಟ್, ಸ್ಕಾೃನರ್ ಮತ್ತು ಪ್ರಿಂಟರ್‌ಗಳನ್ನು ಒದಗಿಸುವವರೆಗೂ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ, ಹಕ್ಕು ಪತ್ರ, ನಮೂನೆ ಒನ್ ಟು ಫೈವ್ ರ ವೆಬ್ ಅಪ್ಲಿಕೇಶನ್ ಪೌತಿ ಆಂದೋಲನ ಆ್ಯಪ್‌ಗಳ ಮೊಬೈಲ್ ತಂತ್ರಾಂಶದ ಕೆಲಸ ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ತಾಲೂಕು ಕಚೇರಿಯ ಮುಂಭಾಗ ಜಮಾವಣೆಗೊಂಡ ಗ್ರಾಮ ಆಡಳಿತಾಧಿಕಾರಿಗಳು ಶಿರಸ್ತೆದಾರ್ ಶಕೀಲಾಭಾನು ಅವರಿಗೆ ಮನವಿ ಸಲ್ಲಿಸಿದರು.