ಅರ್ಚಕರ ನಿವೃತ್ತಿ ವಯೋಮಿತಿ ಏರಿಕೆಗೆ ಒತ್ತಾಯ

tth dharmika
ತೀರ್ಥಹಳ್ಳಿ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕ ಮತ್ತು ಉಪಾದಿವಂತರ ಒಕ್ಕೂಟವನ್ನು ರಾಜ್ಯ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಉದ್ಘಾಟಿಸಿದರು. ಶ್ಯಾಮಸುಂದರ ದೀಕ್ಷಿತ್, ರಾಘವೇಂದ್ರ ಭಟ್, ಮಿಥುನ್ ಅಯ್ಯಂಗಾರ್ ಇತರರಿದ್ದರು.
Published on

ತೀರ್ಥಹಳ್ಳಿ: ಮುಜರಾಯಿ ದೇವಾಲಯಗಳ ಅರ್ಚಕರನ್ನು 60 ವರ್ಷಕ್ಕೆ ನಿವೃತ್ತಿ ಮಾಡುವ ಇಲಾಖೆ ಆದೇಶವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿರುವ ಪರಿಣಾಮ ಮುಜರಾಯಿ ದೇವಾಲಯಗಳ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆಯುತ್ತಿವೆ ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕರ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಹೇಳಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಬುಧವಾರ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕ ಮತ್ತು ಉಪಾದಿವಂತರ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಇಲ್ಲದ ಈ ನಿಯಮವನ್ನು ಸಡಿಲಿಸಿ ಅರ್ಚಕರ ನಿವೃತ್ತಿ ವಯೋಮಿತಿಯನ್ನು 90 ವರ್ಷಗಳಿಗೆ ಏರಿಸಬೇಕು ಹಾಗೂ ತಂದೆಯ ವೃತ್ತಿಯನ್ನು ಮಗನಿಗೇ ನೀಡಬೇಕು ಎಂದು ಒತ್ತಾಯಿಸಿದರು.

ದೇವಸ್ಥಾನಗಳ ನಿರ್ವಹಣೆಯನ್ನು ಸಾರ್ವಜನಿಕರಿಗೆ ನೀಡಬೇಕು ಎನ್ನುವುದು ಅರ್ಥಹೀನ. ಮಠಾಧೀಶರೊಬ್ಬರು 36 ಸಾವಿರ ದೇವಸ್ಥಾನಗಳನ್ನು ತಮ್ಮ ಮಠಕ್ಕೆ ವಹಿಸಿಕೊಡುವಂತೆ ಕೇಳುತ್ತಿರುವುದು ಆಶ್ಚರ್ಯದ ಸಂಗತಿ. ಅಂತಹ ಸ್ಥಿತಿ ಬಂದರೆ ಹೋರಾಟ ಅನಿವಾರ್ಯವಾಗಲಿದೆ. ಅರ್ಚಕರಲ್ಲಿ ಒಗ್ಗಟ್ಟು ಅಗತ್ಯ. ಯಾವ ಕಾರಣಕ್ಕೂ ವ್ಯಾಜ್ಯವನ್ನು ನ್ಯಾಯಾಲಯಕ್ಕೆ ಒಯ್ಯಬೇಡಿ ಎಂದರು.

ಹಾಲಿ ಸರ್ಕಾರ ಅರ್ಚಕ ಸಮುದಾಯದ ಹಿತದೃಷ್ಟಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಸೇರಿ ಹಲವು ಸವಲತ್ತು ನೀಡಿದೆ. ಇದಕ್ಕೆ ಈವರೆಗೂ ರಾಜ್ಯಪಾಲರ ಅನುಮತಿ ದೊರೆತಿಲ್ಲ. ಈ ಬಗ್ಗೆ ರಾಜ್ಯಪಾಲರ ಮನವೊಲಿಸುವಂತೆ ಪ್ರತಿಪಕ್ಷದ ಮುಖಂಡರಿಗೂ ಮನವಿ ಮಾಡಲಾಗಿದೆ. ಭೂ ಸುಧಾರಣೆ ಕಾಯ್ದೆ ಜಾರಿಯಾದ ನಂತರದಲ್ಲಿ ಅರ್ಚಕರ ಸಮುದಾಯದ ಜೀವನ ನಿರ್ವಹಣೆ ಸಂಕಷ್ಟದಲ್ಲಿದೆ. ಕಳೆದುಕೊಂಡಿರುವ ಭೂಮಿ ಬಗ್ಗೆ ಪರಿಹಾರ ದೊರಕಿಸಿಕೊಡುವಂತೆ ಪ್ರಧಾನಿ ಅವರ ಮೊರೆ ಹೋಗಲು ತೀರ್ಮಾನಿಸಿದ್ದೇವೆ ಎಂದರು.

ಒಕ್ಕೂಟದ ಸಹಕಾರ್ಯದರ್ಶಿ ಶ್ಯಾಮಸುಂದರ ದೀಕ್ಷಿತ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ 512 ಮುಜರಾಯಿ ದೇವಸ್ಥಾನಗಳಿವೆ. ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು 177 ದೇವಸ್ಥಾನಗಳು ತೀರ್ಥಹಳ್ಳಿ ತಾಲೂಕಿನಲ್ಲಿವೆ. ಪ್ರಥಮ ಬಾರಿಗೆ ಅರ್ಚರಿಗೆ ಇಲ್ಲಿ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಭಕ್ತರನ್ನು ಅರ್ಚಕರು ಗೌರವದಿಂದ ಕಾಣಬೇಕು. ಗುರುತಿನ ಚೀಟಿ, ಆಧಾರ್, ಪಾನ್ ಕಾರ್ಡ್ ಮುಂತಾದ ದಾಖಲೆಗಳನ್ನು ಹೊಂದಿರಬೇಕು

ಗುರುತಿನ ಚೀಟಿ ಮುದ್ರಿಸಿಕೊಟ್ಟ ಶಂಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಒಕ್ಕೂಟದ ತಾಲೂಕು ಅಧ್ಯಕ್ಷ ರಾಘವೇಂದ್ರ ಭಟ್, ಜಿಲ್ಲಾ ಒಕ್ಕೂಟದ ಮಿಥುನ್ ಅಯ್ಯಂಗಾರ್, ಶಿರಸ್ತೇದಾರ್ ಸತ್ಯಮೂರ್ತಿ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ತುಂಬ್ರಮನೆ ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net