ಸ್ಮಶಾನ ಜಾಗ ಗುರುತಿಸುವಂತೆ ಒತ್ತಾಯ

skp protest (1)
ಶಿಕಾರಿಪುರ ತಾಲೂಕಿನ ಹುಲುಗಿನಕಟ್ಟೆಯಲ್ಲಿ ಸ್ಮಶಾನ ಜಾಗ ಗುರುತಿಸಿಕೊಡುವಂತೆ ಒತ್ತಾಯಿಸಿ ರಸ್ತೆಯಲ್ಲೇ ಧರಣಿ ನಡೆಸಿದರು. ಕುಮಾರ ನಾಯ್ಕ, ಚಂದ್ರಾನಾಯ್ಕಾ, ಚನ್ನೇಶ್ ನಾಯ್ಕ, ಗಿರೀಶ್ ನಾಯ್ಕ ಇತರರಿದ್ದರು.
Published on

ಶಿಕಾರಿಪುರ: ಅಂತ್ಯಕ್ರಿಯೆ ಮಾಡಲು ಅರಣ್ಯ ಇಲಾಖೆ ವಿರೋಧ ಮಾಡಿದ್ದರಿಂದ ಹುಲಗಿನಕಟ್ಟೆ ಗ್ರಾಮಸ್ಥರು ಕೆಲಕಾಲ ಪ್ರತಿಭಟನೆ ನಡೆಸಿ ನಡು ರಸ್ತೆಯಲ್ಲೇ ಅಂತ್ಯಕ್ರಿಯೆ ಮಾಡಲು ಮುಂದಾದರು.

ಹುಲಗಿನಕಟ್ಟೆ ಗ್ರಾಮದ ಕುಮಾರ ನಾಯ್ಕ ಅವರ ತಾಯಿ ಗಂಗೀಬಾಯಿ ನಿಧನರಾಗಿದ್ದರು. ಸಮೀಪದ ಕಾಡಿನಲ್ಲಿ ಅಂತ್ಯಕ್ರಿಯೆಗಾಗಿ ಸಿದ್ಧತೆ ಮಾಡಿಕೊಳ್ಳುವಾಗ ಅರಣ್ಯ ಇಲಾಖೆಯವರು ಇದು ಸ್ಮಶಾನದ ಜಾಗವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸರ್ವೇ ನಂ.90ರಲ್ಲಿ 5 ಎಕರೆ ಜಾಗ ಸ್ಮಶಾನಕ್ಕಾಗಿ ಮಂಜೂರಾಗಿದೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಜಾಗ ಗುರುತಿಸದೇ ಇರುವುದರಿಂದ ಈ ಗೊಂದಲಕ್ಕೆ ಕಾರಣವಾಯಿತು. ಅರಣ್ಯ ಇಲಾಖೆಯವರು ವಿರೋಧಿಸಿದಾಗ ಗ್ರಾಮದ ಜನರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಅಂತ್ಯಕ್ರಿಯೆ ಮಾಡಲು ಕೂಡ ಕಷ್ಟಪಡಬೇಕಾಗಿದೆ. ಜಿಲ್ಲಾಧಿಕಾರಿಗಳು ಈಗಾಗಲೇ ಸರ್ವೇ ನಂ.90ರಲ್ಲಿ 5 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಆಶ್ವಾಸನೆ ಕೊಟ್ಟಂತೆ ಅಧಿಕಾರಿಗಳು ನಿಗದಿತ ಸಮಯದೊಳಗೆ ಜಾಗ ಗುರುತು ಮಾಡಿಕೊಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ರಾಷ್ಟ್ರೀಯ ಗೋರ್ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಾನಾಯ್ಕಾ ಎಚ್ಚರಿಸಿದರು.

ನಮಗೆ ಅಂತ್ಯಕ್ರಿಯೆಗೆ ಅವಕಾಶ ನೀಡುತ್ತಿಲ್ಲ. ಜಮೀನು ಇದ್ದವರು ಅವರು ಹೊಲ, ಗದ್ದೆ, ತೋಟಗಳಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಸ್ಮಶಾನಕ್ಕಾಗಿ ನಾವು ಸಾಕಷ್ಟು ಬಾರಿ ಅರಣ್ಯ ಮತ್ತು ಕಂದಾಯ ಇಲಾಖೆಗೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಬಾರದಿದ್ದರೆ ರಸ್ತೆ ನಡುವೆಯೇ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಮೃತರ ಮಗ ಕುಮಾರ್ ನಾಯ್ಕ ಪಟ್ಟುಹಿಡಿದರು.

ಸ್ಥಳಕ್ಕೆ ತಹಸೀಲ್ದಾರ್ ಮಂಜುಳಾ ಭಜಂತ್ರಿ, ಸಿಪಿಐ, ಆರ್‌ಎಫ್‌ಒ ಹಿರೇಮಠ್ ಆಗಮಿಸಿದರು. ನಂತರ ತಹಸೀಲ್ದಾರ್ ಮಧ್ಯಸ್ಥಿಕೆಯಲ್ಲಿ ಶವಸಂಸ್ಕಾರಕ್ಕೆ ಜಾಗ ತೋರಿಸಲಾಯಿತು. ಮಂಜೂರಾದ ಸ್ಥಳವನ್ನು ಶೀಘ್ರವೇ ಗುರುತಿಸಿ ಕೊಡುವುದಾಗಿ ಭರವಸೆ ನೀಡಿ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟರು.

ಗ್ರಾಪಂ ಸದಸ್ಯ ಚನ್ನೇಶ್ ನಾಯ್ಕ, ಗಿರೀಶ್ ನಾಯ್ಕ, ರವಿಕುಮಾರ್, ಜಯಪ್ರಕಾಶ್ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net